Friday, July 25, 2008

ರಾಜ್ಯ ರಾಜ್ಯಗಳಲ್ಲಿ ಮಾರಾಟ, ಎರಡು ಶ್ರೇಣಿಗಳಲ್ಲಿ ಮಾರಾಟ: ರಾಜಕೀಯದ ಬಿಗ್ ಬಜಾರ್!!

ಅಮ್ಮಾ ನಾ ಸೇಲಾದೆ,ಬಿಜೆಪಿ ಪಾಲಾದೆ ಎಂದು ಕಾಶೀನಾಥ್ ಶೈಲಿಯಲ್ಲಿ, ಬಿಜೆಪಿ ಸೇರಿದ ತುರುವೇಕೆರೆ ನವರಸ ನಾಯಕನನ್ನು ಜಾಡಿಸಿದ ಕಾಂಗ್ರೆಸ್, ದಿಲ್ಲಿಯ ಸಿಂಗರನ್ನು ಕಿಂಗ್ ಮಾಡಲು ಉತ್ತರ ಪ್ರದೇಶದ ಕುಳ್ಳ ಜನಾರ್ಧನ ರೆಡ್ಡಿಯ ಮೂಲಕ ಕರ್ನಾಟಕದ ಬಿಜೆಪಿ ತಂತ್ರವನ್ನು ಬಳಸಿದಾಗ, ನಮ್ಮ ನವರಸ ನಾಯಕ ಜಗ್ಗೇಶ್ ಸ್ವಲ್ಪ ಮಟ್ಟಿಗೆ ನೆಮ್ಮದಿಗೊಂಡರು... ಅವ್!! ಯಾಕೆಂದರೆ ಇನ್ನು ಅವರ ಮೇಲೆ ಸೇಲಾದ, ಪಾಲಾದ ಎಂದು ಆಪಾದಿಸುವವರ ಸಂಖ್ಯೆ ಸ್ವಲ್ಪ ಇಳಿಮುಖವಾಗಲಿದೆ ಎಂಬ ಆಶಯ... ಅವ್!!

ಹಿಂದೆಲ್ಲ ರೌಡಿಗಳಿಗೆ "ಮಾರೋ" "ಹುಡಿ" ಎಂದು ಪೋಲಿಸ್ ಜೀಪಿನ ಬಾನೆಟ್ ಮೇಲೇರಿ ಮಿಜೋರಮ್ ಶೈಲಿಯಲ್ಲಿ ಅಬ್ಬರಿಸುತ್ತಿದ್ದ ಸಾಂಗ್ಲಿಯಾನರಿಗೆ ಮೊನ್ನೆ ಲೋಕಸಭೆಯಲ್ಲಿ ತಮ್ಮ ಪಕ್ಷದವರೇ ತನಗೆ "ಮಾರೋ" ಎನ್ನುತ್ತಾ ಮೇಲೆರೆಗಿದ್ದು ನೋಡಿ ಸದನದ ಡೆಸ್ಕ್ ಹತ್ತಲು ಯೋಚನೆ ಮಾಡಿದ್ದು ಸುಳ್ಳು ಅಂತೀರಾ :)? ಕನ್ನಡದ ಕಟ್ಟಾಳು ಶಿವಣ್ಣ ಕೂಡ?!! ಛೆ!ಛೆ! ನಾಗಾರ್ಜುನಕ್ಕೆ ತಡೆಯೊಡ್ಡಿಲ್ಲ ಎಂಬ ಕಾರಣ ನೈಜವಾದರೂ, ಪುತ್ರ ಮುಂದಿನ ಕಾಂಗ್ರೆಸ್ ಅಭ್ಯರ್ಥಿ ಎಂಬ ಕಾರಣಕ್ಕೆ ತಟಸ್ಥರಾದ ನೇರ ನುಡಿಯ ಉಡುಪಿಯವರಿಗೆ ಸೊರಬದಲ್ಲಿ ಕುಟುಂಬ ರಾಜಕಿಯಕ್ಕಾದ ಗತಿ ನೆನಪಿಗೆ ಬಾರದಿದದ್ದು ವಿಪರ್ಯಾಸ!!

ರಾಜ್ಯದಲ್ಲಿ ಎಂ.ಎಲ್.ಎ ಮತ್ತು ಎಂ.ಪಿ ಎಂಬ ಎರಡು ಶ್ರೇಣಿಗಳಲ್ಲಿ ಮಾರಾಟಗೊಂಡ ನಮ್ಮ ರಾಜಕಾರಣಿಗಳು, ಇಂದಿನ ರಾಜಕೀಯ ಹಣ ಗಳಿಸುವ ದಂಧೆಯಾಗಿ ಮಾರ್ಪಟ್ಟಿದೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಚುನಾವಣಾ ಸಮಯದಲ್ಲಿ "ಇನ್ವೆಸ್ಟ್ " ಗೆದ್ದ ಮೇಲೆ "ಹಾರ್ವೆಸ್ಟ್" ಎಂಬ ತತ್ವಕ್ಕೆ ಅಂಟಿಕೊಂಡಿರುವ ಈ ಮಂದಿಯ ಬಾಯಲ್ಲಿ ಕ್ಷೇತ್ರದ ಹಿತ, ರಾಜ್ಯದ ಹಿತ ಮತ್ತು ರಾಷ್ಟ್ರದ ಹಿತ ಎಂಬ ಪದಗಳು ಉದುರಿದಾಗ ಇದನ್ನು ನಂಬುವವರ ಬಗ್ಗೆ ಕನಿಕರ ಮೂಡುತ್ತದೆ.

ಪಕ್ಷಾಂತರಕ್ಕೆ ೧೦ ರಿಂದ ೩೦ ಕೋಟಿ ಡಿಮಾಂಡ್ ಮಾಡುವ ಎಂ ಎಲ್ ಏಗಳು, ೫೦ ರಿಂದ ೧೦೦ ಕೋಟಿ ಡಿಮಾಂಡ್ ಮಾಡುವ ಎಂ.ಪಿಗಳು, ಹಣ ಪಡೆದ ನಂತರ ಮುಂದಿನ ಚುನಾವಣೆವರೆಗೆ ಯಾವುದೇ ಡೀಲ್ 'ಗಳಿಗೆ ಕೈಹಾಕದೆ ಇದ್ದಲ್ಲಿ ಆ ಕ್ಷೇತ್ರದ ಮತದಾರರು ನಿಟ್ಟುಸಿರು ಬಿಟ್ಟಾರು. ಹೀಗಾದಲ್ಲಿ ಅದು ಮತದಾರರಿಗೆ ಮಾಡುವ ಉಪಕಾರವಾದಿತು. ಆದರೆ ಅವರಿಗೆ ಹಣ ನೀಡಿದವ, ನೀಡಿದ ಹಣದ ಬದಲಿಗೆ ರಾಜ್ಯವನ್ನೇ ಕೊಳ್ಳೆ ಹೊಡೆಯಲು ಮುಂದಾದರೆ? ಯಾರಾದರು ಹಣ ಸುಮ್ಮನೆ ಚಲ್ಲುತ್ತಾರೆಯೆ? ರಾಜ್ಯದಲ್ಲಿ ಈಗ ಆಗುತ್ತಿರುವುದು ಅದೇ ಅಂತೀರಾ ? :) ಹಾಗಾಗದಿರಲಿ ಎಂದು ಆಶಿಸೋಣ(ಅಶಿಸೋದು ಬಿಟ್ಟು ಬೇರೆ ದಾರಿ ಇಲ್ಲ )

ಐಪಿಎಲ್' ಪಂದ್ಯಾವಳಿಗೆ ಹರಾಜುಗೊಳ್ಳುವ ನಮ್ಮ ಕ್ರಿಕೆಟಿಗರಂತೆ, ಮುಂದೆ ಸರ್ಕಾರ ರಚಿಸಲು ಎಂ.ಎಲ್.ಎ ಮತ್ತು ಎಂ.ಪಿಗಳ ಹರಾಜು ಪ್ರಕ್ರಿಯೆ ಸಕ್ರಮಗೊಳ್ಳಬಹುದು. ಯಾರಿಗೂ ಸ್ಪಷ್ಟ ಬಹುಮತ ಬಾರದಿದ್ದಲ್ಲಿ ಸರಕಾರ ರಚಿಸಲು ಎಂಟ್ಹತ್ತು ಪಕ್ಷಗಳ/ಗುಂಪುಗಳ ಕಸರತ್ತು. ಯಾರು ಅಧಿಕ ಶಾಸಕ / ಎಂಪಿಗಳನ್ನು ಖರಿದಿಸುತ್ತಾರೋ ಅವರದೇ ಸರಕಾರ!! ಆ ಸರಕಾರಕ್ಕೊಂದು ಹೆಸರು!! ಉದಾ: ಬಳ್ಳಾರಿ ಚ್ಯಾಲೆಂಜೆರ್ಸ್, ಹಾಸನ್ ಸೂಪರ್ ಕಿಂಗ್ಸ್, ಸಿದ್ದುಸ್ ನೈಟ್ ರೈಡೆರ್ಸ್ , ಶಿಕಾರಿಪುತ್ತೂರ್ ಡೆರ್ಡೇವಿಲ್ಸ್, ಧರ್ಮುಸ್ ಚಾರ್ಜರ್ಸ್, ಖರ್ಗೆಸ್ ಸ್ಲೀಪಿಂಗ್ ರಾಯಲ್ಸ್ ಮತ್ತು ಕೃಷ್ನಾಸ್ ಸಿಂಗಾಪುರ್ ಡ್ರೀಮ್ಸ್ !! ಸೆಮಿಫೈನಲ್, ಫೈನಲ್'ಗಳ ಜಂಜಾಟವಿಲ್ಲ.....ಸಿದಾ ವಿಧಾನಸೌಧಕ್ಕೆ.

ಯಾರ್ಯಾರ್ ಅದೃಷ್ಟ ಹ್ಯಾಗ್ ಹ್ಯಾಗ್ ಇದಿಯೋ ಯಾರಿಗೊತ್ತು ಸ್ವಾಮಿ. ಇದೆಲ್ಲದರ ಮಧ್ಯೆ ಓಟು ನೀಡುವ ಮತದಾರನಿಗೆ ಒಂದು ಓಟಿಗೆ ಕನಿಷ್ಠ ಮತ್ತು ಗರಿಷ್ಠ (ಕ್ಷೇತ್ರ ಮತ್ತು ಅಭ್ಯರ್ಥಿಯ ಹಣಬಲ ಹೊಂದಿಕೊಂಡು)ಮೊತ್ತ ಗೊತ್ತು ಮಾಡಿ ಚುನಾವಣೆಗೆ ಇಳಿದರೆ.........ಇದರ ಮುಂದೆ ಐಪಿಎಲ್'ನ 20 20ಯಾವ್ ಲೆಕ್ಕ ಸ್ವಾಮಿ?!!

ಇಂತಿ ನಿಮ್ಮ ಪ್ರೀತಿಯ,
ಅಧಿಕಪ್ರಸಂಗಿ

No comments: