Thursday, May 15, 2008

ರಾಯಲ್ ಚಾಲೆಂಜರ್ಸ್: ಅಡಿದ್ದಕ್ಕಿಂತ ತೂರಾಡಿದ್ದೆ ಹೆಚ್ಚು !!ತಂಡ ಆಯ್ಕೆ ಮಾಡಿದಾಗಲೇ ಹಲವರು ಹುಬ್ಬೇರಿಸಿದ್ದರು. ಕೊನೆಗೂ ಅಂದುಕೊಂಡಂತೆ ಅಯಿತು!! ಸೋಲಿನ ಮೇಲೆ ಸೋಲು..ಅದರ ಮೇಲೆ ಇನ್ನೊಂದು ಸೋಲು! ಹೀಗೆ ಸೋಲಿನ ಸರಪಳಿಯ ನಡುವೆ ದೃಷ್ಟಿ ಅಗಬಾರದೆಂದು ಒಂದೆರೆಡು ಗೆಲುವು!

ಮೊದಲ ಪಂದ್ಯದಲ್ಲಿ ಕೊಲ್ಕೋತ ತಂಡದ ಬೃಹತ್ ಮೊತ್ತವನ್ನು ಬೆನ್ನಟ್ಟಲು ಹೊರಟ ಬೆಂಗಳೂರು ತಂಡದಿಂದ ಆರಂಭಿಕರಾಗಿ ಯಾರು ಬರುತ್ತಾರೆಂಬ ಕೂತೂಹಲವಿತ್ತು. ಆದರೆ ದ್ರಾವಿಡ್ ಮತ್ತು ಜಾಫರ್ ಹೆಗಲ ಮೇಲೆ ಬ್ಯಾಟ್ ಹೊತ್ತುಕೊಂಡು ಬಂದದ್ದು ನೋಡಿ ನಗು ತಡೆಯಲಾಗಲಿಲ್ಲ. ನನಗೆ ಅವರು ಆಟಗಾರಿಗಿಂತ ಕಾಡಿಗೆ ಕಟ್ಟಿಗೆ ಕಡಿಯಲು ಹೆಗಲ ಮೇಲೆ ಕೊಡಲಿ ಹೊತ್ತು ಹೊರಟ ಕಿಟ್ಟು-ಪುಟ್ಟುವಿನಂತೆ ಕಂಡುಬಂದರು!! ಮೊದಲ ರನ್ ಗಳಿಸಲು ಕನಿಷ್ಠ ಎರಡು ಓವರಗಳನ್ನು ಕಬಳಿಸುವ ಚಟವಿರುವ ಇಬ್ಬರು ಮೊದಲ ಓವರುಗಳಲ್ಲಿ ಉತ್ತಮ ಆರಂಭ ನಿಡಲು ವಿಫಲರಾದರು . ದ್ರಾವಿಡ್ ಮೂರು ಬಾಲಗಳಲ್ಲಿ ಎರಡು ರನ್ ಗಳಿಸಿ ಔಟ್ ಆದರೆ ಜಾಫರ್ ಭಾಯಿ ಹದಿನಾರು ಬಾಲುಗಳಲ್ಲಿ ಆರು ರನ್ ಗಳಿಸಿ ಔಟಾದರು. ಮುಂದೆ ಬಂದವರು ಕ್ರಿಸ್ನಲ್ಲಿ ನಿಂತರೆ ಸಿಡಿಲು ಬಡಿಯಬಹುದು ಎಂಬ ಹೆದರಿ ಬೇಗ ಬೇಗನೆ ಪೆವಿಲಿಯನ್ ಸೇರಿಕೊಂಡರು. ಅಂತೂ ೧೪೦ ರನ್ನುಗಳ ಬೃಹತ್ ಅಂತರದಿಂದ ತಂಡ ಸೋಲೊಪ್ಪಿಕೊಂಡಿತು.ಮುಂದಿನ ಪಂದ್ಯಗಳಲ್ಲಿ ಇದೆ ತೆರೆನಾದ ಪ್ರದರ್ಶನ ಮತ್ತು ಅದೇ ಫಲಿತಾಂಶ. ಮಧ್ಯೆ ಒಂದೆರೆಡು ಗೆಲುವುಗಳು ಹಳದಿ ಕೆಂಪು ಧಿರುಸಿನ ಮೇಲೆ ಭರವಸೆ ಮೂಡಿಸಿದರೂ ಮುಂದೆ ಮತ್ತದೇ ಹಳೆ ಚಾಳಿ.

ಶಿವನಾರಾಯಣ್ ಚಂದ್ರಪಾಲ್, ವಾಸಿಂ ಜಾಫರ್ ಮತ್ತು ಸುನಿಲ್ ಜೋಶಿಯನ್ನು ಈ ರೀತೀಯ ಪಂದ್ಯಾವಳಿಗೆ ದ್ರಾವಿಡ್ ಹೇಗೆ ಆಯ್ಕೆ ಆಯ್ಕೆ ಮಾಡಿದರೋ ದೇವರೇ ಬಲ್ಲ. ಜೋಶಿ ರಣಜಿಯಲ್ಲಿ ಉತ್ತಮ ಸಾಧನೆ ತೋರಿದರೂ, ಚಿನ್ನಸ್ವಾಮಿ ಕ್ರೀಡಾಂಗಣ ತನ್ನ ಮನೆಯಂಗಣವಾದರೂ ಉತ್ತಮ ಪ್ರದರ್ಶನ ತೋರಲಿಲ್ಲ. ಅನಿಲ್ ಕುಂಬ್ಳೆ ಸ್ವತಃ ಆಯ್ಕೆಯಿಂದ ಹೊರಗುಳಿಯುತ್ತಿದ್ದರೆ ಮಾನ ಉಳಿಸಿಕೊಳ್ಳುತ್ತಿದ್ದರು. ಅವರ ಇತಿ ಮಿತಿಗಳು ಅವರಿಗೆ ತಿಳಿಯಬೇಕಿತ್ತು. ಭರತ್ ಚಿಪ್ಲಿ ಸಿಕ್ಕಿದ ಅವಕಾಶ ಬಳಸಿಕೊಳ್ಳಲಿಲ್ಲ. ಕಾಲಿಸ್ ದ್ರಾವಿಡ್ ಮೇಲೆ ಮುನಿಸಿಕೊಂಡವರಂತೆ ನಿರಸ ಆಟ ಪ್ರದರ್ಶಿಸಿದರು. ಮಲ್ಯರ ನೆಚ್ಚಿನ ಮಿಸ್ಬಾ ಉಲ್ ಹಕ್ ಕಡಿದು ಗುಡ್ಡೆ ಹಾಕಿದ್ದು ಎಲ್ಲರು ನೋಡಿದ್ದಾರೆ. ಬೌಲರ್ 'ಗಳು, ಮೊದಲ ಪಂದ್ಯವೊಂದನ್ನು ಬಿಟ್ಟು ಮತ್ತೆಲ್ಲ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಉಪಯೋಗವಾಗಲಿಲ್ಲ.

ಮತ್ತೆ ಚಾರು ಶರ್ಮಾ!! ಸ್ವಾಮಿ, ಆತನ ಕ್ರಿಕೆಟ್ ಜ್ಞಾನ, ಗೆಳತಿ ಮಂದಿರಾ ಬೇಡಿಯ ಸೀರೆ ಸೆರೆಗಿನಷ್ಟೇ ತೆಳು!! ಆತ ತಂಡದ ಸಿ ಇ ಓ (ಹೋ) !!

ಇವರ ಈ ಆಟದ ಪರಿ ನೋಡಿ ಜನ ಉಗಿಯಲು ಶುರುಹಚ್ಚಿಕೊಂಡ ಕೂಡಲೇ ಮಲ್ಯ ಇದು ನನ್ನ ಆಯ್ಕೆಯ ತಂಡವಲ್ಲ ಎಂಬ ಬಾಂಬ್ ಸಿಡಿಸಿದರು. ಇವತ್ತಿನ ವರದಿಯಲ್ಲಿ ಮಲ್ಯರ ಸ್ನೇಹಿತರ ಪ್ರಕಾರ ಮಲ್ಯಗೆ, ಧೋನಿ ಮತ್ತು ಉತ್ತಪ್ಪರನ್ನು ತಂಡಕ್ಕೆ ಸೇರಿಸಿಕೊಳ್ಳುವ ಹಂಬಲ ಇತ್ತತಂತೆ, ಆದರೆ ದ್ರಾವಿಡ್ ಮತ್ತೆ ಚಾರು ಶರ್ಮಾ ತಡೆದರಂತೆ!! ಅಂತೂ ದ್ರಾವಿಡ್ ಹೋದಲೆಲ್ಲ "ಹರಕೆಯ ಕುರಿ"ಯಾಗುತ್ತಿದ್ದಾರೆ!!

ಹಾಗೆ ಈ ತಂಡದ ಮೇಲಿನ ಇನ್ನೊಂದು ಅರೋಪವೆಂದರೆ "ತಂಡದ ಆಟಗಾರರ ನಡುವೆ ಐಕ್ಯತೆ, ಭಾಂಧವ್ಯ ( Bonding)ಇಲ್ಲ" ಎಂಬುದು. ಈ ಆರೋಪ ನಿವಾರಿಸಲು ಒಂದು ಉಪಾಯ ಇದೆ!! ಮುಂದಿನ ಬಾರಿ ತಂಡದ ಹೆಸರನ್ನು "ಯು ಬಿ ಬೆಂಗಳೂರು" (United Beverages, Bengaluru) ಎಂದು ಮರುನಾಮಕರಣ ಮಾಡೋದು. ಯಾಕಂದ್ರೆ ಹೆಸರಿನಲ್ಲೇ ಐಕ್ಯತೆ ಇದ್ರೆ ತಂಡದಲ್ಲಿ ಇನ್ನು ಎಷ್ಟಿರಬೇಡ ಹೇಳಿ ? ಅಲ್ವಾ? ಮತ್ತೆ ಅದು ಆರ್ ಸಿ ಯಷ್ಟು ಸ್ಟ್ರಾಂಗ್ ಕೂಡ ಅಲ್ಲ ಎಂಬ ಹೆಗ್ಗಳಿಕೆ ಬೇರೆ!! ಸ್ಟ್ರಾಂಗ್ ಕಿಕ್'ಗಿಂತ ಲೈಟ್ ಕಿಕ್'ನಲ್ಲಿ ಮಜಾ ಜಾಸ್ತಿ ! ಫಿಲ್ಡಿಂಗ್ ಮಾಡೋವಾಗ ಡೈವ್ ಹೊಡೆದರೂ ರಪ್ಪ (ಬೇಗ) ಮೆಲೇಳಬಹುದು ನೋಡಿ!! ಒಂಟಿ ರನ್ (Cheeky Single) ಕದಿಯುವ ಭರದಲ್ಲಿ ಕ್ರಿಸ್ ಸಮಿಪಿಸುತ್ತಿದ್ದಂತೆ ಅಯತಪ್ಪಿ ಮುಗ್ಗರಿಸಿ ಬಿದ್ದರೂ "ಎಂತಹ ಕಮಿಟ್ಮೆಂಟ್" ಎಂದು ಹೊಗಳಿಕೆ ಬೇರೆ ಸಿಗುತ್ತೆ ! ಅಲ್ವಾ?! ಅದಕ್ಕೆ UB ಓಕೆ, RC ಯಾಕೆ ?

ಏನೇ ಅಗಲಿ ಮುಂದಿನ ಪಂದ್ಯಗಳಲ್ಲಾದರು (ಇಲ್ಲದಿದ್ದರೆ ಮುಂದಿನ ವರ್ಷವಾದರು) ತಂಡ ಗೆಲ್ಲಲಿ, ತಾವು ಧರಿಸುವ ಕೆಂಪು ಹಳದಿಯ ಬಣ್ಣಕ್ಕೆ ಮೈದಾನದಲ್ಲಿ ಮರ್ಯಾದೆ ಸಿಗುವಂತೆ ಮಾಡಲಿ ಎಂದು ಹಾರೈಸೋಣ....ಚಿಯರ್ಸ್.

ಇಂತಿ ನಿಮ್ಮ ಪ್ರೀತಿಯ,
ಅಧಿಕಪ್ರಸಂಗಿ

2 comments:

ವಿ.ರಾ.ಹೆ. said...

ನಮಸ್ತೆ,

ಈ ವಿಷಯದಲ್ಲಿ ನಿಮ್ಮದು ಅಧಿಕ ಪ್ರಸಂಗವೇನೂ ಇಲ್ಲ ಬಿಡಿ. :) ಮಲ್ಯ ಸಾಹೇಬ್ರು ನೋಡ್ಕೋತಾರೆ ಅದನ್ನ.
ಮುಂದಿನ ವರ್ಷ ಕೆಂಪು ಹಳದಿ ಪಟ ಪಟಿಸಬೇಕು ಮೈದಾನದಲ್ಲಿ ಮತ್ತು ಎಲ್ಲೆಲ್ಲೂ. :)

-ವಿಕಾಸ್

ಅಧಿಕಪ್ರಸಂಗಿ said...

ಧನ್ಯವಾದಗಳು ವಿಕಾಸ್ :) ಮುಂದಿನ ವರ್ಷ ತೂರಾಡದೆ ಆಡಲಿ ಎಂದು ಹಾರೈಸೋಣ.