Sunday, April 27, 2008

ಈ ಸಾರಿಯಾದ್ರು ಬಿಜೆಪಿಗೆ ಬಹುಮತ ಸಿಗಬಹುದಾ ಮಾರಾಯರೇ..?

ಈ ಸಾರಿಯಾದ್ರು ಬಿಜೆಪಿಗೆ ಬಹುಮತ ಸಿಗಬಹುದಾ ಮಾರಾಯರೇ...? ಹೇಳೋಕ್ಕೆ ಆಗಲ್ಲ ಗುರು, ಮ್ಯಾಜಿಕ್ ಫಿಗರ್ಗಿಂತ ೧೦ -೧೫ ಸೀಟು ಕಮ್ಮಿ ಬಂದ್ರೂ ಬರಬಹುದು...ಏನಪ್ಪಾ ಯಶವಂತಪುರದ ಕಡೆ ಹೋಗಿ ಮ್ಯಾಜಿಕ್ ಫಿಗರ್ ಗಿಗರ್ ಅನ್ನಬ್ಯಾಡ, ಕಡೆಗೆ ಭಜ್ಜಿ ಶ್ರಿಶಾಂತನಿಗೆ ಇಕ್ಕಿದಂಗೆ ಇಕ್ಕಿಯಾರು! ಇಲ್ಲಾ ಸ್ವಾಮಿ ಈ ಬಾರಿ ಮತ್ತೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರಕ್ಕಾಗಿ ಕಿಚಡಿಯಾಗ್ತಾವೆ ನೋಡ್ತಾ ಇರಿ !! (ಜನರ ಅಂಬೋಣ)

ಮಾಯಾವತಿಯ ಆನೆ, ಬಂಗಾರಪ್ಪನವರ ಸೈಕಲ್, ಮುತಾಲಿಕರ ಸೇನೆ ಮತ್ತು ಬಂಡಾಯಗಾರರ ಬಾಂಬ್ ಈ ಬಾರಿ ಚುನಾವಣೆ ಎಂಬ ಉಪ್ಕರಿಗೆ ಕೊತ್ತೊಂಬ್ರಿ ಸೊಪ್ಪು, ಇರುಳ್ಳಿ ಹಚ್ಚುವ ಕೆಲಸ ಮಾಡಲಿವೆ. ಅಂತೂ ಭಜ್ಜಿಯ ಕಾಪಾಳಮೋಕ್ಷಕ್ಕೆ ಕೆಂಪೆರಿದ ಶ್ರಿಶಾಂತನ ಮೊಗದಂತೆ ಕರ್ನಾಟಕದ ರಾಜಕೀಯ ಚುನಾವಣೆಯ ರಂಗೆರಿಸಿಕೊಂಡಿದೆ.

ಈ ಬಾರಿಯ ಚುನಾವಣೆ ಕನ್ನಡಿಗರ ಪಾಲಿಗೆ ಮಹತ್ವದ್ದಾಗಿದೆ. ಗಡಿ ವಿವಾದಗಳ ಹೊಗೆ ಕವಿದಿರುವ ಈ ಸಂದರ್ಭದಲ್ಲಿ ರಾಜ್ಯದ ಹಿತ ಕಾಪಾಡುವ ಸರಕಾರವೊಂದನ್ನು ಸ್ಥಾಪಿಸುವ ಜವಾಬ್ದಾರಿ ಕನ್ನಡಿಗರ ಪಾಲಿಗೆ ಇದೆ. ಕನ್ನಡಿಗರದ್ದೇ ಎಂದು ಹೇಳಿಕೊಳ್ಳುವ ಒಂದೇ ಒಂದು ಪ್ರಾದೇಶಿಕ ಪಕ್ಷ ಅಸ್ಥಿತ್ವದಲ್ಲಿ ಇಲ್ಲದಿರುವುದರಿಂದ ಕನ್ನಡಿಗರು ಇರುವ ಎರಡು ಮೂರು ರಾಷ್ಟ್ರೀಯ ಪಕ್ಷಗಳಲ್ಲಿ ಯಾವುದಾದರೊಂದನ್ನು ಆರಿಸುವುದು ಅನಿವಾರ್ಯ.

ಹಿಂದಿನಿಂದಲೂ ಎಲ್ಲ ಕೇಂದ್ರ ಸರಕಾರಗಳು ನಮ್ಮ ರಾಜ್ಯವನ್ನು ನಿರ್ಲಕ್ಷಿಸುತ್ತಲೇ ಬಂದಿವೆ. ಆದರೆ ಈಗಿನ ಕೇಂದ್ರ ಸರ್ಕಾರವಂತೂ ಹಟಕ್ಕೆ ಬಿದ್ದಂತೆ ಕರ್ನಾಟಕದ ಹಿತವನ್ನು ಮೂಲೆಗುಂಪು ಮಾಡಿದೆ. ಬರ ಪರಿಹಾರವಿರಲಿ, ನೆರೆ ಪರಿಹಾರವಿರಲಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿಕೆ ಪ್ರಶ್ನೆ ಇರಲಿ, ಗಡಿವಿವಾದವಿರಲಿ ಎಲ್ಲದರಲ್ಲೂ ಅನ್ಯಾಯವನ್ನೇ ಎಸಗಿದೆ. ಅನ್ಯ ರಾಜ್ಯದ ಮಿತ್ರ ಪಕ್ಷಗಳ ಒತ್ತಡಕ್ಕೆ ಮಣಿದು ಅದು ತನ್ನ ಅಸಾಮರ್ಥ್ಯನ್ನು ಮೆರೆದಿದೆ. ಆದುದರಿಂದ ಸಹಜವಾಗಿಯೇ ಕಾಂಗ್ರೆಸ್ ಕನ್ನಡ, ಕರ್ನಾಟಕ ಪರ ನಿಲುವು ತಳೆಯಲು ವಿಫಲವಾಗಿದೆ. ಕರ್ನಾಟಕದ ನರೆ ರಾಜ್ಯಗಳಲ್ಲಿ ಕಾಂಗ್ರೆಸ್ ಬಲವಾಗಿರುವುದರಿಂದ, ಕರ್ನಾಟಕದ ಕಾಂಗ್ರೆಸ್ ಘಟಕಕ್ಕೆ ಅವುಗಳ ವಿರುದ್ದ ಕಠಿಣವಾಗಿ ವರ್ತಿಸುವ ಹಕ್ಕನ್ನು ಹೈಕಮಾಂಡ್ ನಿಡುತ್ತಿಲ್ಲ. ಅಂದರೆ ಅದರ ಎಲ್ಲ ನಿಲುವುಗಳು ದೆಹಲಿ ಮುಖಂಡರ ಆಜ್ಞೆಯ ಮೇಲೆ ಅವಲಂಬಿತವಾಗಿದೆ.

ಆದರೆ ಬಿಜೆಪಿಯ ಇತ್ತೀಚಿನ ಕೆಲವು ಕನ್ನಡಪರ ನಿಲುವುಗಳು ಈ ನಿಟ್ಟಿನಲ್ಲಿ ಅಶಾದಾಯಕವಾಗಿದೆ. ಚುನಾವಣೆ ಅದಕ್ಕೆ ಕಾರಣವಾದರು ಸಂಸತ್ತಿನಲ್ಲಿ ಅದು ಕೆಲವೊಮ್ಮೆ ರಾಜ್ಯ ಪರ ಹೋರಾಟ ಮಾಡಿದ್ದನ್ನು ನಿರ್ಲಕ್ಷಿಸುವಂತಿಲ್ಲ. ದಕ್ಷಿಣದಲ್ಲಿ ಅದಕ್ಕೆ ನೆಲೆ ಇರುವುದು ಕರ್ನಾಟಕದಲ್ಲಿ ಮಾತ್ರ. ಆದುದರಿಂದ ಅದು ಸಹಜವಾಗಿಯೇ ಕರ್ನಾಟಕ ಪರವಾಗಿರಬೇಕು. ಮುಂದೆ ಅದು ಕೇಂದ್ರದಲ್ಲಿ ಅಧಿಕಾರ ಪಡೆದರೆ ಮತ್ತು ಅದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದರೆ ರಾಜ್ಯಕ್ಕೆ ಏನಾದರೂ ಉತಮವಾದದ್ದನ್ನು ನಿರೀಕ್ಷಿಸಬಹುದು. ಸರಕಾರ ರಚಿಸಲು ಅನ್ಯ ರಾಜ್ಯದ ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆದರು ಕೂಡ ಈಗಿನ ಕೇಂದ್ರ ಸರಕಾರದ ವರ್ತನೆಗಿಂತ ಉತ್ತಮವಾಗಿ ಇರುವುದರಲ್ಲಿ ಯಾವುದೇ ಸಂಶಯವಿಲ್ಲ. ಆದುದರಿಂದ ಬಿಜೆಪಿ ಇತರ ಪಕ್ಷಗಳಿಗಿಂತ ಕನ್ನಡಿಗರಿಗೆ ಹತ್ತಿರವಾಗಿದೆ.

ಮತ್ತೆ ಜೆಡಿಎಸ್ ಎಂಬ ಪಕ್ಷ ಇಗಲೇ ೨೦ರಿಂದ ೨೫ ಶಾಸಕರನ್ನು ಹೊಂದಿ ಮುಂದಿನ ಸರಕಾರವನ್ನು ಅಲುಗಾಡಿಸುತ್ತೆವೆಂದು ಕನ್ನಡಿಗರನ್ನು ಹೆದರಿಸುತ್ತಿರುವುದರಿಂದ ಅದರ ಬಗ್ಗೆ ಮಾತು ಅನಗತ್ಯ.

ಎಲ್ಲ ಅಂಶಗಳನ್ನು ಗಮನಿಸಿದರೆ ಬಿಜೆಪಿ ಕರ್ನಾಟಕಕ್ಕೇ ಒಂದು ಉತ್ತಮ ಕನ್ನಡ ಪರ ಸರಕಾರ ನೀಡಬಲ್ಲದೆಂದು ನನ್ನ ಅನಿಸಿಕೆ. ಅದಕ್ಕೆ ಸ್ಪಷ್ಟ ಬಹುಮತದ ಅಗತ್ಯ ಇದೆ. ಅದನ್ನು ಕನ್ನಡಿಗರು ಮನಸ್ಸು ಮಾಡಿದರೆ ನೀಡಬಹುದು. ಇಲ್ಲದಿದ್ದಲ್ಲಿ ಕಳೆದ ಬಾರಿಯಂತೆ ಸಮ್ಮಿಶ್ರ ಸರಕಾರದಿಂದ ರಾಜ್ಯದ ಮಾನ ಹರಾಜಾಗುವುದು ಖಂಡಿತ.

ಹೆಣ್ಣಿರಲಿ, ಗಂಡಿರಲಿ ಮಕ್ಕಳೆರೆಡೆ ಇರಲಿ ಎನ್ನುವಂತೆ, ಬಿಜೆಪಿ ಇರಲಿ ಕಾಂಗ್ರೆಸ್ ಇರಲಿ ಕರ್ನಾಟಕದಲ್ಲಿ ಒಂದೆ ಪಕ್ಷ ಆಡಳಿತ ನಡೆಸಲಿ.

ಇಂತಿ ನಿಮ್ಮ ಪ್ರೀತಿಯ,
ಅಧಿಕಪ್ರಸಂಗಿ