ಚಿಕ್ಕಂದಿನಲ್ಲಿ ಶಾಲಾ ಬ್ಯಾಗಿನಲ್ಲಿ ಇರೋ ವಸ್ತುಗಳಲ್ಲಿ ಪುಸ್ತಕಕ್ಕಿಂತ ಪ್ರಿಯವಾದದ್ದು ಅಂದ್ರೆ ಯಾವುದು ಹೇಳಿ? ಟಿಫಿನ್ ಬಾಕ್ಸ್ ಅಂದ್ರಾ?. ಹಾಗೆ ರಜೆ ಬಂತಂದ್ರೆ ಸೈಕಲ್ ಸವಾರಿ ಅಂದ್ರೆ ಯಾರಿಗೆ ಇಷ್ಟವಿರಲಿಲ್ಲ, ಅಲ್ವಾ? ಆದರೆ ಈಗ ಇವೆರೆಡರ ಹೆಸರು ತೆಗೆದರೆ ಬೆಚ್ಚಿಬಿಳುವಂತಾಗಿದೆ ಸ್ವಾಮೀ!! ಹಿಂದೆ ಯಾರಾದ್ರು "ಕುಂಬಳ ಕಾಯಲ್ಲಿ ಬಾಂಬು ಉಂಟು ಮಾರಾಯ್ರೆ" ಅಂದ್ರೆ "ಆ.. ಒಂದು...ಆ..ಎರಡು" ದಿನೇಶರ ನೆನಪಾಗಿ ನಗ್ತಿದ್ವಿ ನಾವು , ಈಗ ಹಾಗೆ ಹೇಳಿದ ಕೂಡಲೇ ಕುಂಬಳಕಾಯಿ ಯಾರ ಬಳಿ, ಎಲ್ಲಿ ಇದೆ ಎಂದು ತಿಳಿದುಕೊಳ್ಳುವ ಗೋಜಿಗೆ ಹೋಗದೆ ಕಣ್ಣುಮುಚ್ಚಿಕೊಂಡು ಜೀವ ಉಳಿಸಿಕೊಳ್ಳಲು ಓಡುವ ಪರಿಸ್ಥಿತಿ ಬಂದಿದೆ. ಇನ್ನು ಟಿಫಿನ್ ಬಾಕ್ಸಿನಲ್ಲಿ ಬಾಂಬ್ ಇದೆಯೆಂದು ಯಾರಾದರು ಉಸುರಿದರೆ ಅದನ್ನು ಹೊಂದಿದವರು ಸ್ಥಳದಲ್ಲಿಯೇ ಮೂರ್ಛೆ ತಪ್ಪಿ ಬೀಳುವುದು ಗ್ಯಾರಂಟಿ. ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಅನಾಥ ಸೈಕಲ್'ಗಳ ಚಕ್ರದ ಗಾಳಿ ತೆಗೆದು ವಿಕೃತ ಆನಂದ ಪಡುತ್ತಿದ್ದ ಹುಡುಗರು, ಈಗ ಅದರ ಬಳಿ ಸುಳಿಯಲು ಭಯಪಡುತ್ತಿದ್ದಾರೆ!! ಆ ಮಟ್ಟಿಗೆ ಸೈಕಲ್ ಮತ್ತು ಟಿಫಿನ್ ಬಾಕ್ಸಗಳ ಬಗ್ಗೆ ಜನರಲ್ಲಿ ಭಯ ಹುಟ್ಟಿಸಿದ್ದಾರೆ "ಭಯ ಉತ್ಪಾದನೆ ಮಾಡುವ" ಮಲ್ಟಿ ನ್ಯಾಷನಲ್ ಕಂಪನಿಯವರು. ಇದೆಲ್ಲ ಚಿಂತೆಯನ್ನು ತಲೆಗೆ ತುಂಬಿಕೊಂಡು ಬಸ್ಸಿನಲ್ಲಿ ಪ್ರಯಾಣಿಸುವಾಗ ಎಲ್ಲಿಯಾದರೂ ಭಯಂಕರ ಶಬ್ದದೊಡನೆ ಬಸ್ಸಿನ ಚಕ್ರ ಸ್ಫೋಟಿಸಿದರೆ?!! ಗಟ್ಟಿ ಹೃದಯದವ್ರು ಬದುಕಿಯಾರು...ಇನ್ನುಳಿದವರಿಗೆ ದೇವರೆ ಗತಿ.
ಪ್ರತಿ ಬಾರಿ ಸ್ಫೋಟ ಸಂಭವಿಸಿದಾಗ ಕೇಂದ್ರ ರಾಜ್ಯದೆಡೆಗೆ, ರಾಜ್ಯ ಕೇಂದ್ರದೆಡೆಗೆ ಬೆರೆಳು ತೋರಿಸಿ ಆರೋಪಿಸುವುದು ಮಾಮೂಲಾಗಿ ಬಿಟ್ಟಿದೆ. ಕೇಂದ್ರ ಸೂಚನೆಗಳು ಸಾಮನ್ಯವಾಗಿ ಹವಾಮಾನ ಇಲಾಖೆಯ ವರದಿಗಳಂತೆ ತೋರಿಬರುತ್ತದೆ ಎಂದು ಗುಜರಾತ್ ಮುಖ್ಯಮಂತ್ರಿ ಅಂದ್ರೆ, ನಮ್ಮವರು ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ತರಲು ಕೆಲವರು ಹೂಡಿದ ಸಂಚು ಎಂದು ಆರೋಪಿಸುತ್ತಾರೆ. ಇವರೆಲ್ಲರ ಆರೋಪ ಪ್ರತ್ಯಾರೋಪಗಳ ಮಧ್ಯೆ ಪ್ರಾಣ ಕಳೆದುಕೊಳ್ಳುವವರು ಮಾತ್ರ ಜನಸಾಮನ್ಯರು. ಇನ್ನು ಮುಂದೆ ಇಂತಹ ಸೂಚನೆಗಳನ್ನು ನೇರವಾಗಿ ಜನರಿಗೆ ನೀಡಿದರೆ ಕೆಲವರ ಪ್ರಾಣವಾದರು ಉಳಿದಿತು.
ಇನ್ನು ಪರಿಹಾರದ ಮೊತ್ತ. ಈ ಹಿಂದೆ ಗಡಿಯಲ್ಲಿ ಸಂಜೌತ ಎಕ್ಸಪ್ರೆಸ್ ಬಾಂಬ್ ಸ್ಫೋಟದಲ್ಲಿ ಮಡಿದವರಿಗೆ ೧೦ ಲಕ್ಷ ಪರಿಹಾರ ನೀಡಿ ಉಗ್ರ "ಮಾನವೀಯತೆ" ಮೆರೆದ ನಮ್ಮ ಸರಕಾರಗಳು ರಾಜ್ಯಗಳಲ್ಲಿ ಇಂತಹ ಘಟನೆಗಳು ಸಂಭವಿಸಿ ಮಡಿದವರಿಗೆ ೧ ಲಕ್ಷ ನೀಡಿ ಕೈತೊಳೆದುಕೊಳ್ಳುತ್ತಿವೆ!! ಬೆಂಗಳೂರು ಸ್ಫೋಟದಲ್ಲಿ ಮಡಿದ ಮಹಿಳೆಗ್ಯಾಕೆ ಈ ಅನ್ಯಾಯ? ಬಸ್ ಸ್ಟ್ಯಾಂಡ್'ನಲ್ಲಿ ಬಸ್ಸಿಗಾಗಿ ಕಾಯೋದು ಕೂಡ ಅಪರಾಧವೆ? ಇಂತಹ ಅನಾಹುತಹಗಳಿಗೆ ಸಾರ್ವಜನಿಕರು ಜವಾಬ್ದಾರರಲ್ಲದಿರುವುದರಿಂದ, ಇದರಿಂದ ಸಾಯುವರಿಗೆ ಯೋಗ್ಯ ಪರಿಹಾರ ನೀಡುವುದು ಸರಕಾರದ ಕರ್ತವ್ಯ.
ಹಾಗೆ ಇಂತಹ ಘಟನೆಗಳು ನಡೆದಾಗ ಪಕ್ಷ ಭೇದ ಮರೆತು ಖಂಡಿಸಬೇಕಾದದ್ದು ಜವಾಬ್ದಾರಿಯುತ ರಾಜಕೀಯ ಪಕ್ಷಗಳ ಕರ್ತವ್ಯ. (ಆದರೆ ನಮ್ಮವರಿಗೆ ಇದರ ಬಗ್ಗೆ ಚರ್ಚೆ ಮಾಡೋದಕ್ಕಿಂತ ಒಂದು ಆತ್ಮಹತ್ಯೆ ಪ್ರಕರಣವನ್ನು ಸಿ ಬಿ ಐ'ಗೆ ಒಪ್ಪಿಸಬೇಕೆ ಬೇಡವೇ ಎಂಬ ಚಿಂತೆ ಹೆಚ್ಚಾದಂತೆ ಕಾಣುತ್ತಿದೆ. ಅವರದ್ದು ಸಿ ಬಿ ಐ ಗಾಗಿ ಹೋರಾಟ, ಇವರಿಗೆ ಸಿ ಓ ಡಿಯಲ್ಲೇ ತೃಪ್ತಿ. ಉದ್ದೇಶ ಸ್ಪಷ್ಟವಾಗಿದೆ! ಸ್ವಾಮೀ, ಆತ್ಮಹತ್ಯೆ ನಡೆದು ಹೋಗಿದೆ. ಆತ್ಮಹತ್ಯೆ ಮಾಡಿಕೊಂಡವರ ಆತ್ಮಕ್ಕೆ ಶಾಂತಿ ಸಿಗಲೆಂದು ಶುದ್ದ ಮನಸ್ಸಿನಿಂದ ಹಾರೈಸಿದರೆ, ಅದೇ ಆ ಜೀವಕ್ಕೆ ನೀಡೋ ಗೌರವ. ಅದು ಬಿಟ್ಟು ಕೇವಲ ರಾಜಕೀಯ ಲಾಭಗಳಿಗೋಸ್ಕರ ದಿನನಿತ್ಯ ಅದನ್ನು ಕಂಡಲ್ಲಿ ಪ್ರಸ್ತಾವಿಸಿ, ಅವರ ಕುಟುಂಬಕ್ಕೆ ಮತ್ತಷ್ಟು ನೋವು ನೀಡುವ ಕೆಲಸ ನಿಲ್ಲಲಿ.)
ಇಂತಹ ಸ್ಫೋಟಗಳು ಸಂಭವಿಸಿದಾಗ ಮತ್ತು ಮುಂದೆ ಆಗದಂತೆ ಸಾರ್ವಜನಿಕರು ಹೇಗೆ ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂಬ ಮಾಹಿತಿಯನ್ನು ಇಲಾಖೆ ನೀಡಿದರೆ ಉತ್ತಮ. ಹಾಗೆ ಹುಸಿ ಬಾಂಬ್ ಕರೆ ಮಾಡಿ ಶಾಲಾ ಮಕ್ಕಳಲ್ಲಿ ಕೂಡ ಭಯ ಹುಟ್ಟಿಸಿ ವಿಕೃತ ಸಂತೋಷ ಪಡುವ ಆಸಾಮಿಗಳನ್ನು ಕೂಡ ಭಯೋತ್ಪಾದಕರಂತೆ ಕೋಕಾ ಕಾಯ್ದೆಯಡಿ ಬಂಧಿಸಿದರೆ ಅಂತಹವರ ಚರ್ಬಿ ಪೂರ್ಣವಾಗಿ ಕರಗುತ್ತದೆ.
ಮುಂದೆ ಇಂತಹ ಭಯ ಹುಟ್ಟಿಸುವ ಮಲ್ಟಿ ನ್ಯಾಷನಲ್ ಕಂಪೆನಿಗಳ ಕಣ್ಣು ಹೋಟೆಲುಗಳ ಮೇಲೆ ಬಿಳದಿದ್ದರೆ ಸಾಕು! ಇಲ್ಲದಿದ್ದಲ್ಲಿ ಪೂರಿ, ವಡೆ, ಬಿಸ್ಕುಟ್ ಅಂಬಡೆ, ರಾಗಿ ಮುದ್ದೆ ತಿನ್ನುವ ಮೊದಲು ಲೋಹ ಶೋಧಕ ಸಾಧನಗಳನ್ನು ಬಳಸುವ ಕರ್ಮ ಎದುರಾದಿತು!!
ವರ್ಷಗಳ ಹಿಂದೆ ಕೇವಲ ಗುಂಡಿನ ಸದ್ದನ್ನು ಮಾತ್ರ ಕೇಳಿದ ಕರ್ನಾಟಕ, ಈಗ ಬಾಂಬ್'ಗಳ ಆರ್ಭಟವನ್ನು ಸಹಿಸಬೇಕಾಗಿದೆ. ಇಂತಹ ಕುಕೃತ್ಯಗಳನ್ನು ಚಿಗುರಿನಲ್ಲೇ ಚಿವುಟಿ ಹಾಕಿದರೆ ಉತ್ತಮ. ಇಲ್ಲದಿದ್ದರೆ........
ಇಂತಿ ನಿಮ್ಮ ಪ್ರೀತಿಯ,
ಅಧಿಕಪ್ರಸಂಗಿ
Subscribe to:
Post Comments (Atom)
No comments:
Post a Comment