Sunday, September 7, 2008

ಬುಧಿಸಾಗರ್ ಕುಂದರನ್: ಭಾರತೀಯ ಕ್ರಿಕೆಟ್ ಮರೆತ ಕನ್ನಡದ ಕ್ರಿಕೆಟಿಗ.

ಭಾರತೀಯ ಕ್ರಿಕೆಟ್ ಈಗ ಒಂದು ಕ್ರೀಡೆಯಾಗಿರದೆ, ಹಣದ ಹೊಳೆ ಹರಿಸುವ ಒಂದು ಉದ್ಯಮವಾಗಿ ಮಾರ್ಪಟ್ಟಿದೆ. ಈಗ ಒಬ್ಬ ಕ್ರಿಕೆಟಿಗ ಒಂದೇ ಒಂದು ಪಂದ್ಯದಲ್ಲಿ ಮಿಂಚಿದರೂ ಮುಂದಿನ ಐದಾರು ಪಂದ್ಯಗಳಿಗೆ ಆತ ತಂಡದ ಕಾಯಂ ಸದಸ್ಯ. ಆ ಮೂಲಕ ಆತ ಕೋಟ್ಯಾಧಿಪತಿ. ಆದರೆ ಅರುವತ್ತರ ದಶಕದಲ್ಲಿ ಈಗಿನ ನಮ್ಮ ಏಕದಿನ ತಂಡದ ನಾಯಕ ವಿಕೆಟ್ ಕೀಪರ್, ಬ್ಯಾಟ್ಸಮನ್ ಮಹೇಂದ್ರ ಸಿಂಗ್ ಧೋನಿಯನ್ನು ಮೀರಿಸುವಂತ ಒಬ್ಬ ಉತ್ತಮ ವಿಕೆಟ್ ಕೀಪರ್ ಆಕ್ರಮಣಶೀಲ ಬ್ಯಾಟ್ಸಮನ್ ಹೇಗೆ ನಮ್ಮ ಕ್ರಿಕೆಟ್ ಮಂಡಳಿಯ ಹೊಲಸು ರಾಜಕೀಯಕ್ಕೆ ಬಲಿಯಾಗಿ ತನ್ನ ೩೦ನೆ ವಯಸ್ಸಿನಲ್ಲಿಯೇ ದೇಶ ತೊರೆದು ಸ್ಕಾಟ್'ಲ್ಯಾಂಡ್ ಹೋಗಿ ನೆಲಸಬೇಕಾಯಿತು, ಮತ್ತು ಆತನನ್ನು ನಮ್ಮ ಕ್ರಿಕೆಟ್ ಮಂಡಳಿ ಮುಂದೆ ಹೇಗೆ ಮರೆಯಿತು ಎಂಬುದನ್ನು ನೋಡಿ.

ಆ ನತದೃಷ್ಟ ಕ್ರಿಕೆಟಿಗನೆ ಕನ್ನಡ ನಾಡಿನ ಬುಧಿಸಾಗರ್ ಕೃಷ್ಣಪ್ಪ ಕುಂದರನ್. 1939'ರ ಅಕ್ಟೋಬರ್ 2'ರಂದು ಹುಟ್ಟಿದ ಬುಧಿಸಾಗರ್ ಕುಂದರನ್ ರ ಹುಟ್ಟೂರು ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಚ್ಚಿಲ (ಎರ್ಮಾಳ್). ಆಗಿನ ಬಹುತೇಕ ಕರಾವಳಿಯ ಜನರು ಉದ್ಯೋಗವನ್ನರಸಿ ಮುಂಬೈ'ಗೆ ತೆರಳುತ್ತಿದ್ದರು. ಹಾಗೆ ಬುಧಿಸಾಗರ್ ಕುಟುಂಬವು ಮುಂಬೈಗೆ ವಲಸೆ ಹೋಯಿತು. ಚಿಕ್ಕಂದಿನಲ್ಲೇ ಕ್ರಿಕೆಟ್ನಲ್ಲಿ ಆಸಕ್ತಿ ಬೆಳಸಿಕೊಂಡ ಬುಧಿಸಾಗರ್ ಆ ಬಡತನದಲ್ಲಿಯು ಮುಂದೊಂದು ದಿನ ಕ್ರಿಕೆಟ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಕನಸು ಕಾಣುತ್ತಿದ್ದರು. ಇವರ ಕ್ರಿಕೆಟ್ ಹುಚ್ಚಿನ ಬಗ್ಗೆ ತಂದೆಗೆ ಆಕ್ರೋಶವಿದ್ದರೂ ತಾಯಿ ಮಾತ್ರ ಮಗನ ಬೆಂಬಲಕ್ಕೆ ನಿಂತಿದ್ದರು. ತಮ್ಮ ತಾಯಿ, ತಂದೆಗರಿವಿಲ್ಲದಂತೆ ಅವರ ಬಿಳಿ ಬಣ್ಣದ ಪ್ಯಾಂಟ್ ಶರ್ಟನ್ನು ಕ್ರಿಕೆಟಿನ ಬಿಳಿಯುಡುಗೆಯಾಗಿ ಪರಿವರ್ತಿಸಿ ಕೊಟ್ಟಿದ್ದೆ ಬುಧಿಸಾಗರ್'ರವರ ಮೊದಲ ಕ್ರಿಕೆಟ್ ಉಡುಗೆಯಾಯಿತು.

ಮುಂಬೈನಲ್ಲಿ ತಮ್ಮ ಆರಂಭದ ದಿನಗಳಲ್ಲಿ ಬುಧಿಸಾಗರ್ ಪೋರ್ಟ್ ವಿಜಯ್ ಮತ್ತು ಪಿ.ಜೆ.ಹಿಂದೂ ಜಿಮ್ಖಾನ ಪರವಾಗಿ ಆಡುತ್ತಿದ್ದರು. ತಾನಾಡಿದ ಮೊದಲ ಸ್ಥಳೀಯ ಪಂದ್ಯದಲ್ಲಿಯೇ ದ್ವಿಶತಕ ಬಾರಿಸಿ ಭಾರತೀಯ ಕ್ರಿಕೆಟ್ ಲೋಕಕ್ಕೆ ತಮ್ಮ ಆಗಮನವನ್ನು ಸಾರಿದ್ದರು.ಸ್ಥಳೀಯ ಕ್ರಿಕೆಟ್ ಕ್ಲಬ್'ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಬುಧಿ ಮುಂದೆ 1958-59'ರಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಪರವಾಗಿ ಪ್ರವಾಸಿ ವಿಂಡಿಸ್ ತಂಡದ ವಿರುದ್ದ ಮೊದಲ ದರ್ಜೆ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದರು.ಆ ಎರಡು ಪಂದ್ಯಗಳ ಬಳಿಕ ಮುಂದಿನ ವರ್ಷ 1960'ರಲ್ಲಿ ಎಲ್ಲರ ಹುಬ್ಬೆರುವಂತೆ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಪ್ರವಾಸಿ ಆಸ್ಟ್ರೇಲಿಯಾದ ವಿರುದ್ದ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದರು. ಆಗ ಬುಧಿಸಾಗರ್'ಗೆ ಕೇವಲ 20 ವರ್ಷ. ಆಶ್ಚರ್ಯವೆಂದರೆ ತಮ್ಮ 20'ನೆ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಬುಧಿಸಾಗರ್ ಆ ಮುಂಚೆ ಯಾವುದೇ ರಣಜಿ ಪಂದ್ಯವನ್ನಾಡಿರಲಿಲ್ಲ. ರಣಜಿ ಪಂದ್ಯಾವಳಿ ಪ್ರಾರಂಭವಾದ ಮೇಲೆ ಯಾವುದೇ ರಣಜಿ ಪಂದ್ಯವನ್ನಾಡದೆ ನೇರವಾಗಿ ಟೆಸ್ಟ್ ಪಂದ್ಯಗಳಿಗೆ ಅವಕಾಶ ಪಡೆದವರು ಕುಂದರನ್ ಅವರ ನಂತರ ವಿವೇಕ್ ರಾಜ್ದಾನ್ ಮತ್ತು ಪಾರ್ಥಿವ್ ಪಟೇಲ್ ಮಾತ್ರ.

ತಮ್ಮ ಮೊದಲ ಟೆಸ್ಟ್ ಪಂದ್ಯಕ್ಕೆ ಕೀಪಿಂಗ್ ಮಾಡಲು ಸೂಕ್ತ ಗ್ಲೌಸಿಲ್ಲದೆ ತಂಡದ ಇನ್ನೊಬ್ಬ ಕೀಪರ್ ನರೇನ್ ತಹ್ಮನೆಯಿಂದ ಗ್ಲೌಸ್'ನ್ನು ಎರವಲು ಪಡೆದು ಕೀಪಿಂಗ್ ಆರಂಭಿಸಿದ್ದರು. ಮನೆಯಲ್ಲಿ ಮಲಗಿದರೆ ನೆರೆಹೊರೆಯವರ ವಿಪರೀತ ಗಲಾಟೆಗಳು ತೊಂದರೆ ಮಾಡುತ್ತದೆ ಎಂದುಕೊಂಡು ಪಂದ್ಯ ನಡೆದ ಐದೂ ದಿನ ರಾತ್ರಿ ಮುಂಬೈ'ನ ಆಜಾದ್ ಮೈದಾನದಲ್ಲಿ ಬುಧಿಸಾಗರ್ ನಿದ್ದೆ ಮಾಡಿದ್ದರು.

ಮುಂದೆ ಮದ್ರಾಸಿನಲ್ಲಿ ನಡೆದ ಮುಂದಿನ ಟೆಸ್ಟ್'ನಲ್ಲಿ ಕುಂದರನ್ ತನ್ನ ಪರಾಕ್ರಮ ತೋರಿಸಿದ್ದರು. ತಾನೆದುರಿಸಿದ ಮೊದಲ ಓವರಿನಲ್ಲಿಯೆ 16 ರನ್ ಚಚ್ಚಿದ ಕುಂದರನ್'ರ ಬಳಿ ನಂತರ ಆಸ್ಟ್ರೇಲಿಯಾದ ಕ್ರಿಕೆಟ್ ವಿವರಣೆಕಾರ ಮೈಕಲ್ ಚಾರ್ಲ್'ಟನ್ ಧಾವಿಸಿ "ನೀನು ಆಡುತ್ತಿರುವುದು ಟೆಸ್ಟ್ ಕ್ರಿಕೆಟ್ ಎಂಬ ಅರಿವಿದೆಯೆ" ಎಂದು ಕೇಳಿದ್ದರು. ಇಂದಿನ ಏಕದಿನ ಪಂದ್ಯಗಳಲ್ಲಿರುವಂತೆ ತಮ್ಮ ಶಿಕ್ತಿಯುತ ಹೊಡೆತಗಳಿಗೆ ಹೆಸರಾಗಿದ್ದ ಕುಂದರನ್ ಆಸ್ಟ್ರೇಲಿಯಾದ ಬೌಲರಗಳನ್ನು ಹಿಗ್ಗ ಮುಗ್ಗ ಚಚ್ಚಿ 71 ರನ್ನುಗಳನ್ನು ಬಾರಿಸಿದ್ದರು. ಆ ಇನ್ನಿಂಗ್ಸಿನಲ್ಲಿ ಭಾರತದ ಮೊತ್ತ ಕೇವಲ 149. ಮುಂದಿನ ಇನ್ನಿಂಗ್ಸಿನಲ್ಲಿ ಕುಂದೆರನ್'ರ ಗಳಿಕೆ 33 ರನ್. ಭಾರತ ಆ ಟೆಸ್ಟ್ ಸೋತರು ಭಾರತೀಯ ಟೆಸ್ಟ್ ಕ್ರಿಕೆಟಿಗೆ ಓರ್ವ ಆಕರ್ಷಕ ಹೊಡೆಬಡಿಯ ದಾಂಡಿಗ ಮತ್ತು ವಿಕೆಟ್ ಕಿಪರ್'ನ ಪ್ರವೇಶವಾಯಿತು.

ತನ್ನ ಮೂರನೇ ಟೆಸ್ಟ್ ಬಳಿಕ ಬುಧಿ ರಣಜಿ ಪ್ರವೇಶ ಮಾಡಿದರು.ರೈಲ್ವೇಸ್ ಪರವಾಗಿ ಆಡಿದ ಅವರು ಮೊದಲ ಪಂದ್ಯದಲ್ಲಿಯೇ ಅಮೋಘ ದ್ವಿಶತಕ (205) ದಾಖಲಿಸಿದರು. ಅದೇ ವರ್ಷದ ಕೊನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿರುದ್ದ ಮತ್ತೊಂದು ಶತಕ ಸಿಡಿಸಿದರು.

ಮುಂದಿನ ಋತುವಿನಲ್ಲಿ (1961-62)ಸ್ವದೇಶದಲ್ಲಿ ನಡೆದ ಇಂಗ್ಲೆಂಡ್ ವಿರುದ್ದ ಸರಣಿಯಲ್ಲಿ ಮತ್ತು ವಿಂಡಿಸ್ ಪ್ರವಾಸದಲ್ಲಿ ಆಗ ತಾನೆ ಪ್ರವರ್ಧಮಾನಕ್ಕೆ ಬಂದ ಫಾರುಕ್ ಇಂಜಿನಿಯರ್ ಜೊತೆ ಸ್ಥಾನ ಹಂಚಿಕೊಳ್ಳಬೇಕಾಯಿತು.

1962ರಲ್ಲಿ ನಡೆದ ಭಾರತ ಚೀನಾ ಯುದ್ದ ಬುಧಿ ಪಾಲಿಗೆ ಶಾಪವಾಯಿತು. ರೈಲ್ವೇಸ್ ಯುದ್ಧದ ನಿಮಿತ್ತ ತನ್ನ ತಂಡವನ್ನು ಪಂದ್ಯಾವಳಿಯಿಂದ ಹಿಂದೆಗೆದುಕೊಂಡಿತು. ಬುಧಿ ಬರಿಗೈಯಲ್ಲಿ ಕೂರಬೇಕಾಯಿತು!! ಆ ಸಂದರ್ಭವನ್ನು ಉಪಯೋಗಿಸಿಕೊಂಡ ಫಾರುಕ್ ಇಂಜಿನಿಯರ್ ಭಾರತೀಯ ತಂಡದಲ್ಲಿ ಬುಧಿ ಸ್ಥಾನಕ್ಕೆ ಸಂಚಕಾರ ತಂದರು. ಬುಧಿ ತನ್ನ ಸ್ಥಾನ ಮರಳಿ ಪಡೆಯಲು 1963-64ರ ಇಂಗ್ಲೆಂಡ ವಿರುದ್ದ ಸ್ವದೇಶದಲ್ಲಿ ನಡೆದ ಸರಣಿವರೆಗೆ ಕಾಯಬೇಕಾಯಿತು.

ಅವಿಸ್ಮರಣೀಯ ಸರಣಿ: 1964'ರಲ್ಲಿ ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ದ ಸರಣಿ ಬುಧಿಗೆ ಮಾತ್ರವಲ್ಲದೆ ಭಾರತೀಯ ಕ್ರಿಕೆಟ್ ಪಾಲಿಗೆ ಅವಿಸ್ಮರಣೀಯವಾಗಿತ್ತು ಸರಣಿಗೆ ಆಯ್ಕೆಯಾಗಿದ್ದ ಇಂಜಿನಿಯರ್ ಗಾಯದ ಸಮಸ್ಯೆಯಿಂದ ಅನರ್ಹಗೊಂಡಾಗ ಬುಧಿ ತಂಡಕ್ಕೆ ಮತ್ತೆ ಕಾಲಿಟ್ಟರು. ಮದರಾಸಿನಲ್ಲಿ ನಡೆದ ಮೊದಲ ಟೆಸ್ಟಿನಲ್ಲಿ ಆರಂಭಿಕ ಆಟಗಾರನಾಗಿ ಕ್ರೀಸಿಗೆ ಆಗಮಿಸಿದ ಬುಧಿ ಇಂಗ್ಲೆಂಡ್ ಬೌಲರ್'ಗಳನ್ನು ಚಿಂದಿ ಉಡಾಯಿಸಿದರು. ಮೊದಲ ದಿನವೆ ತನ್ನ ಬ್ಯಾಟಿನಿಂದ 170 ರನ್ ಸಿಡಿಸಿದ ಬುಧಿ ಆ ಇನ್ನಿಂಗ್ಸಿನಲ್ಲಿ 31 ಬೌಂಡರಿಗಳ ಮೂಲಕ 192 ರನ್ ಗಳಿಸಿದರು. ಇದು ಈತನಕ ಭಾರತೀಯ ಕೀಪರ್'ನೊಬ್ಬನ ಶ್ರೇಷ್ಠ ವಯಕ್ತಿಕ ಮೊತ್ತ. ಅವರ 31 ಬೌಂಡರಿಗಳ ದಾಖಲೆ ಮುರಿಯಲು 2000-01 ಆಸ್ಟ್ರೇಲಿಯ ವಿರುದ್ದ ಸರಣಿಯಲ್ಲಿ ವಿ ವಿ ಎಸ್ ಲಕ್ಷ್ಮಣ್ ಬರಬೇಕಾಯಿತು. ಬುಧಿ ಆ ಪಂದ್ಯದಲ್ಲಿ ವಿಕೆಟ್ ಹಿಂದುಗಡೆ ಆರು ಬಲಿ ಪಡೆದಿದ್ದರು. ಅದೇ ಸರಣಿಯ ನಾಲ್ಕನೇ ಟೆಸ್ಟಿನಲ್ಲಿ ಬುಧಿ ಮತ್ತೊಂದು ಶತಕ ಸಿಡಿಸಿ ಸರಣಿಯಲ್ಲಿ ಒಟ್ಟು 525 ರನ್ ಕೂಡಿಸಿದರು. ಇಂತಹ ಒಂದು ಉತ್ತಮ ಪ್ರದರ್ಶನದ ಹೊರತಾಗಿಯು ಅವರನ್ನು ಮುಂದಿನ ಆಸ್ಟ್ರೇಲಿಯಾ ವಿರುದ್ದ ಸರಣಿಗೆ ತಂಡದಿಂದ ಕೈಬಿಡಲಾಯಿತು!! ಇದು ಶುದ್ದ ರಾಜಕಿಯವಲ್ಲದೆ ಮತ್ತಿನ್ನೇನು?

1965'ರಲ್ಲಿ ಬುಧಿ ರಣಜಿ ಪಂದ್ಯಾವಳಿಗೆ ರೈಲ್ವೇಸ್ ತೊರೆದು ತನ್ನ ರಾಜ್ಯದ ಮೈಸೂರು ತಂಡ ಮತ್ತು ದಕ್ಷಿಣ ವಲಯದ ಪರವಾಗಿ ಆಡತೊಡಗಿದರು. 1966'ರಲ್ಲಿ ಮತ್ತೆ ರಾಷ್ಟ್ರೀಯ ತಂಡ ಸೇರಿಕೊಂಡ ಬುಧಿ ಮುಂಬೈನಲ್ಲಿ ವಿಂಡಿಸ್ ವಿರುದ್ದ ಟೆಸ್ಟಿನಲ್ಲಿ ವೇಗದ (92 ನಿಮಿಷದಲ್ಲಿ 15 ಬೌಂಡರಿಗಳು) 79 ರನ್ ಗಳಿಸಿ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಮುಂದಿನ ಟೆಸ್ಟಿನಲ್ಲಿ ಉತ್ತಮ ಪ್ರದರ್ಶನ (45 ನಿಮಿಷಗಳಲ್ಲಿ 39 ರನ್ ). ಈ ಮಧ್ಯೆ ಅವರು ಅಭ್ಯಾಸ ಪಂದ್ಯವೊಂದರಲ್ಲಿ ಎರಡು ಗಂಟೆಗಳಲ್ಲಿ 104 ರನ್ ಸಿಡಿಸಿದ್ದರೂ ಮತ್ತೊಮ್ಮೆ ಅವರನ್ನು ಮುಂದಿನ ಸರಣಿಗೆ ಕೈಬಿಡಲಾಯಿತು.

ಕೊನೆಯ ಸರಣಿ: 1967'ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಫಾರುಕ್ ಇಂಜಿನಿಯರ್ ಜೊತೆ ತಂಡಕ್ಕೆ ಮತ್ತೆ ಆಯ್ಕೆಗೊಂಡರು. ಇಂತಹ ಒಂದು ಕಣ್ಣಾಮುಚ್ಚಾಲೆ ಆಟ ಯಾವ ಕ್ರಿಕೆಟಿಗನ ಬಾಳಿನಲ್ಲಿ ನಡೆದಿರಲಿಕ್ಕಿಲ್ಲ. ಉತ್ತಮ ಪ್ರದರ್ಶನದ ನೀಡಿದರೂ ಮುಂದಿನ ಸರಣಿಗೆ ಅವರ ಸ್ಥಾನ ನಿಶ್ಚಿತವಾಗಿರುತ್ತಿರಲಿಲ್ಲ. ಈ ಸರಣಿಯ ಎರಡನೆ ಟೆಸ್ಟಿನಲ್ಲಿ ಭಾರತದ 110 ರನ್ನುಗಳಲ್ಲಿ ಬುಧಿ ಪಾಲು 47! ಈ ಸರಣಿಯ ಕೊನೆಯ ಟೆಸ್ಟಿನಲ್ಲಿ ಬುಧಿ ಆರಂಭಿಕ ಆಟಗಾರನಲ್ಲದೆ, ಆರಂಭಿಕ ಬೌಲರ್ ಆಗಿ ಕೂಡ ಪ್ರದರ್ಶನ ನೀಡಿದ್ದರು. ವಿಕೆಟ್ ಹಿಂದುಗಡೆ ಫಾರುಕ್ ಇಂಜಿನಿಯರ್ ಇದ್ದರಲ್ವಾ!! ಇದೆ ಪಂದ್ಯ ಭಾರತದ ಪರ ಅವರ ಕೊನೆಯ ಪಂದ್ಯವಾಯಿತು. ಯಾಕೆಂದರೆ ಮುಂದಿನ ಆಸ್ಟ್ರೇಲಿಯಾ ವಿರುದ್ದ ಸರಣಿಗೆ ಮತ್ತೆ ಅವರನ್ನು ತಂಡದಿಂದ ಕೈಬಿಡಲಾಯಿತು! ಮುಂದೆ ಬುಧಿ ೩ ವರ್ಷಗಳ ಕಾಲ ಮೈಸೂರು ಪರ ರಣಜಿ ಪಂದ್ಯವನ್ನಾಡಿದರು.

ವಿದೇಶಕ್ಕೆ ವಲಸೆ: ಭಾರತದ ಕ್ರಿಕೆಟ್ ಮಂಡಳಿಯ ರಾಜಕೀಯದಿಂದ ಬೆಸತ್ತ ಬುಧಿ ಕುಂದರನ್ 1970ರಲ್ಲಿ ಗ್ಲಾಸ್ಗವ್'ಗೆ ವಲಸೆ ಹೋದರು. ಹೋಗುವಾಗ ಭಾರತದ ಕ್ರಿಕೆಟ್ ಮಂಡಳಿಯ ಕೆಲ ಅಧಿಕಾರಿಗಳ ಮೇಲೆ ಕಿಡಿ ಕಾರಿದ್ದರು. ಇದರಿಂದಾಗಿ ಅವರನ್ನು ಮಂಡಳಿ ಮುಂದೆ ಯಾವ ಕಾರ್ಯಕ್ರಮಕ್ಕೂ ನೆನಪಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಸ್ಕಾಟಿಷ್ ಲೀಗಿನಲ್ಲಿ ಡ್ರಮ್'ಪೆಲ್ಲಿಯರ್ ಪರವಾಗಿ ಆಡುತ್ತಿದ್ದ ಕುಂದರನ್ ಮುಂದೆ 1980'ರಲ್ಲಿ ತಮ್ಮ 42ನೆ ವಯಸ್ಸಿನಲ್ಲಿ ಬೆನ್ಸನ್ & ಹೆಡ್ಜಸ್ ಕಪ್'ನಲ್ಲಿ ಸ್ಕಾಟ್'ಲ್ಯಾಂಡ್ ತಂಡವನ್ನು ಪ್ರತಿನಿಧಿಸಿದರು. ಬುಧಿ ಅವರ ಸಹಾಯದಿಂದ ಕೋಟ್'ಬ್ರಿಡ್ಜ್ ತಂಡ 1972, 1974, 1975 ಮತ್ತು 1978'ರಲ್ಲಿ ವೆಸ್ಟರ್ನ್ ಯುನಿಯನ್ ಚ್ಯಾಂಪಿಯನ್ ಪಟ್ಟ ಗಳಿಸಿಕೊಂಡಿತು. ಮುಂದೆ ಅವರು 1995ರವರೆಗೂ (57ರ ವಯಸ್ಸಿನಲ್ಲಿ !!) ಡ್ರಮ್'ಪೆಲ್ಲಿಯರ್ ಪರವಾಗಿ ಕಾಣಿಸಿಕೊಳ್ಳುತ್ತಿದ್ದರು.

ಸಾಧನೆ: 18 ಟೆಸ್ಟ್ ಪಂದ್ಯಗಳಲ್ಲಿ (34 ಇನಿಂಗ್ಸ್) 32.70ರ ಸರಾಸರಿಯಲ್ಲಿ 981 ರನ್ನುಗಳನ್ನು ಪೆರಿಸಿದ್ದರು. ಅದರಲ್ಲಿ ಎರಡು ಶತಕ (ಗರಿಷ್ಠ 192) ಮೂರು ಅರ್ಧಶತಕಗಳು ಒಳಗೊಂಡಿವೆ. ಆಡಿದ 34 ಇನ್ನಿಂಗ್ಸ್'ನಲ್ಲಿ ಅವರು 21 ಬಾರಿ ಆರಂಭಿಕ ಆಟಗಾರನಾಗಿ ಕಾಣಿಸಿಕೊಂಡಿದ್ದರು. ವಿಕೆಟ್'ಕೀಪರ್ ಆಗಿ 7 ಸ್ಟಂಪಿಂಗ್ ಮತ್ತು 23 ಕ್ಯಾಚ್'ಗಳನ್ನು ಪಡೆದಿದ್ದರು.
129 ಮೊದಲ ದರ್ಜೆ ಪಂದ್ಯಗಳಲ್ಲಿ (217 ಇನಿಂಗ್ಸ್) 28.97ರ ಸರಾಸರಿಯಲ್ಲಿ ಒಟ್ಟು 5,708 ರನ್ನುಗಳನ್ನು ಗಳಿಸಿದ್ದರು. ಅದರಲ್ಲಿ 12 ಶತಕ, 19 ಅರ್ಧಶತಕಗಳು. 175 ಕ್ಯಾಚುಗಳು ಮತ್ತು 85 ಸ್ಟಂಪಿಂಗ್'ಗಳು. ರಣಜಿಯಲ್ಲಿ ಅವರ ಒಟ್ಟು ಗಳಿಕೆ 2,367 ರನ್ನುಗಳು

ವಿವಾದಗಳು: 1967'ರ ಇಂಗ್ಲೆಂಡ್ ಪ್ರವಾಸದ ವೇಳೆ ತಂಡದ ಆಟಗಾರರು ಅನುಭವಿಸಿದ ಕಷ್ಟಗಳ ಬಗ್ಗೆ ಬುಧಿ ಬಹಿರಂಗವಾಗಿ ಟೀಕಿಸಿದ್ದರು. ಸರಿಯಾದ ಉಡುಗೆಗಳು, ಕ್ರಿಕೆಟ್ ಪರಿಕರಗಳು ಮತ್ತು ಸರಿಯಾದ ಊಟದ ವ್ಯವಸ್ಥೆ ಮಾಡದ ಬಗ್ಗೆ ಮತ್ತು ಬ್ರಿಟಿಷರ ಗುಲಾಮರಂತೆ ವರ್ತಿಸಿದ ತಂಡದ ಅಧಿಕಾರಿಗಳು ಮತ್ತು ಮ್ಯಾನೇಜರ್ ಕೆಕಿ ತಾರಪೋರೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.ಕೊನೆ ಕೊನೆಗೆ ತಮ್ಮನ್ನು ಪದೆ ಪದೆ ತಂಡದಿಂದ ಕೈಬಿಡುತ್ತಿರುವ ಬಗ್ಗೆ ಆಕ್ರೋಶಗೊಂಡಿದ್ದ ಬುಧಿ, ನಾಯಕ ಶೋಕಿಲಾಲ ಮನ್ಸೂರ್ ಅಲಿ ಖಾನ್ ಪಟೌಡಿ ಬಗ್ಗೆ ಅಸಹನೆಗೊಂಡಿದ್ದರು. ಪಟೌಡಿ ಒಬ್ಬ ಮೂಡಿ, ಅಹಂಕಾರದ ಮೂರ್ತಿ ಮತ್ತು ಅವರು ಎಂದೂ ಆಟಗಾರರ ನಾಯಕನಾಗಿರಲಿಲ್ಲ ಎಂದಿದ್ದರು. ಇದೆಲ್ಲ ಮುಂದೆ ಬುಧಿಗೆ ತಿರುಗುಬಾಣವಾಗಿ ಪರಿಣಮಿಸಿತು.

ವಯಕ್ತಿಕ ಬದುಕು: 1967'ರ ಇಂಗ್ಲೆಂಡ್ ಪ್ರವಾಸದ ವೇಳೆ ಪರಿಚಯವಾದ ಬ್ರಿಟಿಷ್ ಯುವತಿ ಲಿಂಡಾಳನ್ನು ವರಿಸಿದ ಬುಧಿ ಅವರಿಗೆ ಇಬ್ಬರು ಪುತ್ರರಿದ್ದಾರೆ.
2005'ರಿಂದ ಶ್ವಾಸಕೋಶದ ಕ್ಯಾನ್ಸರ್'ನಿಂದ ಬಳಲುತ್ತಿದ್ದ ಬುಧಿ 2006ರ ಜೂನ್ 23'ರಂದು ಗ್ಲಾಸ್ಗೌ'ನಲ್ಲಿ ವಿಧಿವಶರಾದರು.

ಕೊನೆ ಮಾತು: ಬುಧಿಸಾಗರ್ ಕೃಷ್ಣಪ್ಪ ಕುಂದರನ್ ಭಾರತ ಕಂಡ ಅತ್ಯುತ್ತಮ ವಿಕೆಟ್ ಕೀಪರ್, ಬ್ಯಾಟ್ಸ್ಮನ್. 60'ರ ದಶಕದಲ್ಲೆ ಟೆಸ್ಟ್ ಕ್ರಿಕೆಟನ್ನು ಈಗಿರುವ ಏಕದಿನ ಶೈಲಿಯಲ್ಲಿ ಆಡುತ್ತಿದ್ದ ಬುಧಿ, ಆಯ್ಕೆಗಾರ ಅವಕೃಪೆಗೆ ಒಳಗಾಗದೆ ಇರುತ್ತಿದ್ದರೆ 1983'ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಕಿರ್ಮಾನಿ ಪ್ರವೇಶ ಅಸಾಧ್ಯವಾಗಿರುತ್ತಿತ್ತೇನೋ!

ಬುಧಿ ಅವರ ನಿಧನದ ನಂತರ " ದಿ ಹಿಂದೂ" ಪತ್ರಿಕೆಯಲ್ಲಿ ಖ್ಯಾತ ಅಂಕಣಕಾರ ಮನು ಚಕ್ರವರ್ತಿ ಶ್ರದ್ದಾಂಜಲಿ ಅರ್ಪಿಸಿದ್ದರು. ಬುಧಿಸಾಗರ್ ಕುಂದರನ್'ರ ಕ್ರಿಕೆಟ್ ಬಾಳಿನ ಬಗ್ಗೆ ಅವರು ಬರೆದದ್ದು ಹೀಗೆ:
“Budhi Kunderan radiated pure dynamism, dazzling all by his hooks and "falling sweep shots" (like Rohan Kanhai), brilliant wicket keeping and athleticism Budhi Kunderan captured the imagination of discerning cricket lovers but his career was ended by regional domination and favoritism”

"Cricket historians do their best to brush aside the truth about Kunderan's disappearance from the Indian cricketing scene, but none with any conscience would suppress the truth that he was axed to accommodate mediocres who were powerful and influential. For that matter none from his own state, then called Mysore, spoke up for him. The treacherous silence of the important office bearers of the Mysore State Cricket Association was for selfish reasons. With an eye on positions of power, the welfare of players was completely sacrificed by the authorities”

"Budhi Kunderan left India with a very heavy heart. He had been brutally martyred. He left as a martyr, never to return"

"For thousands like me the injustice done to Budhi Kunderan, then, has created a deep wound that refuses to heal — even after nearly four decades. The wound hurt us even more when the BCCI never gave him a benefit, and did not even have the courtesy to invite him for its Golden Jubilee celebrations. His death, in a fundamental sense a martyr's death, makes many of us bleed and shed tears in a real profound manner without any sentimentality"

ಇಂದಿನ ಕ್ರಿಕೆಟಿಗರಿಗೆ ಇಂತಹ ಸ್ಥಿತಿ ಕನಸಿನಲ್ಲೂ ಬರಲಿಕ್ಕಿಲ್ಲ, ಆಲ್ವಾ?
(ಚಿತ್ರ ಕೃಪೆ: ದ ಹಿಂದೂ)

ಇಂತಿ ನಿಮ್ಮ ಪ್ರೀತಿಯ,
ಅಧಿಕಪ್ರಸಂಗಿ

Thursday, August 21, 2008

ಅತಿ ಬುದ್ದಿವಂತ?!!



ನಾವು ಕನ್ನಡಿಗರಲ್ಲವೋ, ವಿಶಾಲ ಹೃದಯದವರು. ಕನ್ನಡ ಚಿತ್ರಗಳಿಗಿಂತ ಬೇರೆ ಭಾಷೆ ಚಿತ್ರಗಳನ್ನು ಜಾಸ್ತಿ ನೋಡುತ್ತೇವೆ. ಈ ಹುಡುಗಿ ಹೇಳಿದ ಕಥೆ ಹೇಗಿದೆಯೆಂದರೆ, ಎರಡು ತೆಲುಗು ಎರಡು ಹಿಂದಿ ಭಾಷೆ ಚಿತ್ರ ಸೇರಿಸಿ ಕಥೆ ಹೇಳುತ್ತಿದ್ದಾಳೆ ಇವಳು . ಬಾಂಬ್ ಸಿಡಿಯುವಾಗ ಯಾರೋ ತೂರಿಕೊಂಡು ಓಡಿ ಬಂದನಂತೆ, ಒಂದೇ ಚಕ್ರದಲ್ಲಿ ಬೈಕ್ ಓಡಿಸಿದನಂತೆ, ಇವಳಿಗೆ ಪುಸಕ್ಕನೆ ಲವ್ ಬಂತಂತೆ!!!

ಈ ಮೇಲಿನ ಸಂಭಾಷಣೆಯನ್ನು ಬರೆದವರು ಯಾರೋ ಬದ್ದ ರಿಮೇಕ್ ವಿರೋಧಿಯೋ, ಇಲ್ಲ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಬಲಿಗರು ಅಲ್ಲ. ಸ್ವತಃ ಈ "ಬುದ್ದಿವಂತ "ಎಂಬ ರಿಮೇಕ್ ಚಿತ್ರದ ನಾಯಕನಾಗಿರೋ ಉಪೇಂದ್ರ ಈ ಚಿತ್ರಕ್ಕೆ ಬರೆದ ಸಂಭಾಷಣೆ. ತಮಾಷೆಯ ವಿಷಯವೆಂದರೆ ಈ ಸಂಭಾಷಣೆಯ ನಂತರ ಬರುವ ಹಾಡಿನ ರಾಗ ಕೂಡ ಅನ್ಯ ಭಾಷೆ ಚಿತ್ರದ ಹಾಡಿನ ನಕಲು ಅಂತೆ! ಇಷ್ಟಕ್ಕೆ ಮುಗಿಯಲಿಲ್ಲ ಈ ಬುದ್ದಿವಂತನ ಕರಾಮತ್ತು . ಈ ಚಿತ್ರದ ಇನ್ನೊಂದು ಹಾಡಿನ ರಾಗ ಕೂಡ ಮೂಲ ಚಿತ್ರದಿಂದ ಎಗರಿಸಿದ್ದು ಮತ್ತು ಗಾಬರಿಪಡುವಂತಹ ಇನ್ನೊಂದು ವಿಷಯವೇನೆಂದರೆ ಈ ಚಿತ್ರದಲ್ಲಿ ಒಂದು ಪೂರ್ಣ ತೆಲುಗು ಹಾಡು ಕೂಡ ಇದೆ !! ಬೇರೆ ಭಾಷೆಯ ಚಿತ್ರಗಳಲ್ಲಿ ಒಂದು ಕನ್ನಡ ಪದ ಹುಡುಕೋದು ಕಷ್ಟವಾದರೂ, ನಮ್ಮಲ್ಲಿ ಒಂದು ಸಂಪೂರ್ಣ ಹಾಡಿನಲ್ಲಿ ಅನ್ಯಭಾಷೆಯನ್ನು ಬಳಸಿದರೆ ಏನನ್ನೋಣ?

ರಿಮೇಕ್ ಚಿತ್ರಕ್ಕೆ ಸಬ್ಸಿಡಿ ಕೊಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದ ರಿಮೇಕ್'ಲೈನ್ ವೆಂಕಟೇಶ್ ತರಹದ ನಿರ್ಮಾಪಕರು, ಈಗ ಸರಕಾರ ರಿಮೇಕ್ ಚಿತ್ರಗಳಿಗೆ ಸಬ್ಸಿಡಿ, ತೆರಿಗೆ ವಿನಾಯಿತಿ ನೀಡಿದ ಮೇಲೆ ಅನ್ಯ ಭಾಷೆಯ ನಿರ್ಮಾಪಕರೇ ತಮ್ಮ ಚಿತ್ರಗಳನ್ನು ತಾವೇ ಕನ್ನಡದಲ್ಲಿ ನಿರ್ಮಿಸಲು ಬರುತ್ತಿರುವುದು ನೋಡಿ ಥರಗುಟ್ಟುತ್ತಿದ್ದಾರೆ. ಬೇಕಿತ್ತಾ ಈ ತಂಗಳನ್ನದ ಉಸಬಾರಿ? ರಿಮೇಕ್'ಲೈನ್ ಜೊತೆಗೆ"ಅಮೂಲ್ಯ" ನಿರ್ದೇಶಕ ಎಸ್ ನಾರಾಯಣ್ ಮತ್ತು ಹಳೆ ರಾಮಾಚಾರಿ ಹೊಸ ರಾಮಾಚಾರಿ ಖ್ಯಾತಿಯ ಇಬ್ಬರು ನಟರ ರಿಮೇಕ್ ತೆವಲಿನ ಬಗ್ಗೆ ಚಿಂತಿಸಿದರೆ ನಮಗೆ ಉಳಿಗಾಲವಿಲ್ಲ.

ಓಂ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮವನ್ನೇ ನೀಡಿ, ಬುದ್ದಿವಂತರಿಗಾಗಿ 'ಎ' ಚಿತ್ರ ನಿರ್ದೆಶಿಸಿ , ನಟಿಸಿ , ಚಿತ್ರ ನೋಡಿದ ನಮ್ಮಂಥವರನ್ನು ಪುಕ್ಕಟೆಯಾಗಿ ಬುದ್ದಿವಂತರನ್ನಾಗಿಸಿ, "ಉಪೇಂದ್ರ"ದ ಮೂಲಕ ಉಪ್ಪಿಗಿಂತ ರುಚಿ ಯಾವುದಿಲ್ಲ ಎಂದು ಸಾಬಿತು ಪಡಿಸಿದ ಉಪೇಂದ್ರ ಇಂದು ತನ್ನ ತನ್ನತನ, ಬುದ್ದಿವಂತಿಕೆಯನ್ನೇ ಹಣಕ್ಕಾಗಿ ಕಳೆದುಕೊಂಡು ಬಿಟ್ಟಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. h2o ಚಿತ್ರ ನಿರ್ದೆಶಿಸಿ ಕನ್ನಡದಲ್ಲಿ ತನ್ನ ಯಶಸ್ಸಿಗೆ ಹೊಟ್ಟೆಉರಿಪಡುತ್ತಿದ್ದ ಕೆಲವರಿಗೆ ಸುಮ್ಮನೆ ಒದೆಯಲು ಅವಕಾಶ ಮಾಡಿಕೊಟ್ಟದ್ದು ಸತ್ಯವಾದರೂ, ಮುಂದಿನ ಹೆಚ್ಚಿನ ಎಲ್ಲ ಚಿತ್ರಗಳು ರಿಮೇಕ್ ಆಗಿರುವುದಕ್ಕೆ ಸಬೂಬು ಆಗಬೇಕಾಗಿರಲಿಲ್ಲ.

ಕಾಲ ಮಿಂಚಿಲ್ಲ ಉಪೇಂದ್ರ, ಇನ್ನೂ ನಿಮಗೆ ವಯಸ್ಸಿದೆ, ಉಪಯೋಗಿಸಲು ಸ್ವಂತ ಬುದ್ದಿಯಿದೆ. ಬೇರೆ ಭಾಷೆಗಳ ಹಳಸಲು ಕಥೆ, ಹಾಡುಗಳನ್ನು ನಕಲು ಮಾಡುವುದು ಬಿಟ್ಟು ನಿಮ್ಮ ಬ್ರಾಂಡಿನ ಚಿತ್ರ ನಿರ್ಮಿಸಿ. ಗಣೇಶ್, ವಿಜಯ್'ಗೆ ಬೆಂಬಲವಾಗಿ ನಿಂತ ಕನ್ನಡ ಪ್ರೇಕ್ಷಕರು ಸ್ವಂತಿಕೆಯನ್ನು ತಂದಲ್ಲಿ ಉಪೆಂದ್ರನೆಂಬ ಹಳೆ ಹುಲಿಯ ಬೆಂಬಲಕ್ಕೆ ನಿಲ್ಲಲಾರರೆ?

ಇಂತಿ ನಿಮ್ಮ ಪ್ರೀತಿಯ,
ಅಧಿಕಪ್ರಸಂಗಿ

Friday, August 8, 2008

ಸೈಕಲ್ಲಿಗೂ, ಟಿಫಿನ್ ಬಾಕ್ಸಿಗೂ ಬಂದಾರೆ ಮುನಿಸು.....

ಚಿಕ್ಕಂದಿನಲ್ಲಿ ಶಾಲಾ ಬ್ಯಾಗಿನಲ್ಲಿ ಇರೋ ವಸ್ತುಗಳಲ್ಲಿ ಪುಸ್ತಕಕ್ಕಿಂತ ಪ್ರಿಯವಾದದ್ದು ಅಂದ್ರೆ ಯಾವುದು ಹೇಳಿ? ಟಿಫಿನ್ ಬಾಕ್ಸ್ ಅಂದ್ರಾ?. ಹಾಗೆ ರಜೆ ಬಂತಂದ್ರೆ ಸೈಕಲ್ ಸವಾರಿ ಅಂದ್ರೆ ಯಾರಿಗೆ ಇಷ್ಟವಿರಲಿಲ್ಲ, ಅಲ್ವಾ? ಆದರೆ ಈಗ ಇವೆರೆಡರ ಹೆಸರು ತೆಗೆದರೆ ಬೆಚ್ಚಿಬಿಳುವಂತಾಗಿದೆ ಸ್ವಾಮೀ!! ಹಿಂದೆ ಯಾರಾದ್ರು "ಕುಂಬಳ ಕಾಯಲ್ಲಿ ಬಾಂಬು ಉಂಟು ಮಾರಾಯ್ರೆ" ಅಂದ್ರೆ "ಆ.. ಒಂದು...ಆ..ಎರಡು" ದಿನೇಶರ ನೆನಪಾಗಿ ನಗ್ತಿದ್ವಿ ನಾವು , ಈಗ ಹಾಗೆ ಹೇಳಿದ ಕೂಡಲೇ ಕುಂಬಳಕಾಯಿ ಯಾರ ಬಳಿ, ಎಲ್ಲಿ ಇದೆ ಎಂದು ತಿಳಿದುಕೊಳ್ಳುವ ಗೋಜಿಗೆ ಹೋಗದೆ ಕಣ್ಣುಮುಚ್ಚಿಕೊಂಡು ಜೀವ ಉಳಿಸಿಕೊಳ್ಳಲು ಓಡುವ ಪರಿಸ್ಥಿತಿ ಬಂದಿದೆ. ಇನ್ನು ಟಿಫಿನ್ ಬಾಕ್ಸಿನಲ್ಲಿ ಬಾಂಬ್ ಇದೆಯೆಂದು ಯಾರಾದರು ಉಸುರಿದರೆ ಅದನ್ನು ಹೊಂದಿದವರು ಸ್ಥಳದಲ್ಲಿಯೇ ಮೂರ್ಛೆ ತಪ್ಪಿ ಬೀಳುವುದು ಗ್ಯಾರಂಟಿ. ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಅನಾಥ ಸೈಕಲ್'ಗಳ ಚಕ್ರದ ಗಾಳಿ ತೆಗೆದು ವಿಕೃತ ಆನಂದ ಪಡುತ್ತಿದ್ದ ಹುಡುಗರು, ಈಗ ಅದರ ಬಳಿ ಸುಳಿಯಲು ಭಯಪಡುತ್ತಿದ್ದಾರೆ!! ಆ ಮಟ್ಟಿಗೆ ಸೈಕಲ್ ಮತ್ತು ಟಿಫಿನ್ ಬಾಕ್ಸಗಳ ಬಗ್ಗೆ ಜನರಲ್ಲಿ ಭಯ ಹುಟ್ಟಿಸಿದ್ದಾರೆ "ಭಯ ಉತ್ಪಾದನೆ ಮಾಡುವ" ಮಲ್ಟಿ ನ್ಯಾಷನಲ್ ಕಂಪನಿಯವರು. ಇದೆಲ್ಲ ಚಿಂತೆಯನ್ನು ತಲೆಗೆ ತುಂಬಿಕೊಂಡು ಬಸ್ಸಿನಲ್ಲಿ ಪ್ರಯಾಣಿಸುವಾಗ ಎಲ್ಲಿಯಾದರೂ ಭಯಂಕರ ಶಬ್ದದೊಡನೆ ಬಸ್ಸಿನ ಚಕ್ರ ಸ್ಫೋಟಿಸಿದರೆ?!! ಗಟ್ಟಿ ಹೃದಯದವ್ರು ಬದುಕಿಯಾರು...ಇನ್ನುಳಿದವರಿಗೆ ದೇವರೆ ಗತಿ.

ಪ್ರತಿ ಬಾರಿ ಸ್ಫೋಟ ಸಂಭವಿಸಿದಾಗ ಕೇಂದ್ರ ರಾಜ್ಯದೆಡೆಗೆ, ರಾಜ್ಯ ಕೇಂದ್ರದೆಡೆಗೆ ಬೆರೆಳು ತೋರಿಸಿ ಆರೋಪಿಸುವುದು ಮಾಮೂಲಾಗಿ ಬಿಟ್ಟಿದೆ. ಕೇಂದ್ರ ಸೂಚನೆಗಳು ಸಾಮನ್ಯವಾಗಿ ಹವಾಮಾನ ಇಲಾಖೆಯ ವರದಿಗಳಂತೆ ತೋರಿಬರುತ್ತದೆ ಎಂದು ಗುಜರಾತ್ ಮುಖ್ಯಮಂತ್ರಿ ಅಂದ್ರೆ, ನಮ್ಮವರು ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ತರಲು ಕೆಲವರು ಹೂಡಿದ ಸಂಚು ಎಂದು ಆರೋಪಿಸುತ್ತಾರೆ. ಇವರೆಲ್ಲರ ಆರೋಪ ಪ್ರತ್ಯಾರೋಪಗಳ ಮಧ್ಯೆ ಪ್ರಾಣ ಕಳೆದುಕೊಳ್ಳುವವರು ಮಾತ್ರ ಜನಸಾಮನ್ಯರು. ಇನ್ನು ಮುಂದೆ ಇಂತಹ ಸೂಚನೆಗಳನ್ನು ನೇರವಾಗಿ ಜನರಿಗೆ ನೀಡಿದರೆ ಕೆಲವರ ಪ್ರಾಣವಾದರು ಉಳಿದಿತು.

ಇನ್ನು ಪರಿಹಾರದ ಮೊತ್ತ. ಈ ಹಿಂದೆ ಗಡಿಯಲ್ಲಿ ಸಂಜೌತ ಎಕ್ಸಪ್ರೆಸ್ ಬಾಂಬ್ ಸ್ಫೋಟದಲ್ಲಿ ಮಡಿದವರಿಗೆ ೧೦ ಲಕ್ಷ ಪರಿಹಾರ ನೀಡಿ ಉಗ್ರ "ಮಾನವೀಯತೆ" ಮೆರೆದ ನಮ್ಮ ಸರಕಾರಗಳು ರಾಜ್ಯಗಳಲ್ಲಿ ಇಂತಹ ಘಟನೆಗಳು ಸಂಭವಿಸಿ ಮಡಿದವರಿಗೆ ೧ ಲಕ್ಷ ನೀಡಿ ಕೈತೊಳೆದುಕೊಳ್ಳುತ್ತಿವೆ!! ಬೆಂಗಳೂರು ಸ್ಫೋಟದಲ್ಲಿ ಮಡಿದ ಮಹಿಳೆಗ್ಯಾಕೆ ಈ ಅನ್ಯಾಯ? ಬಸ್ ಸ್ಟ್ಯಾಂಡ್'ನಲ್ಲಿ ಬಸ್ಸಿಗಾಗಿ ಕಾಯೋದು ಕೂಡ ಅಪರಾಧವೆ? ಇಂತಹ ಅನಾಹುತಹಗಳಿಗೆ ಸಾರ್ವಜನಿಕರು ಜವಾಬ್ದಾರರಲ್ಲದಿರುವುದರಿಂದ, ಇದರಿಂದ ಸಾಯುವರಿಗೆ ಯೋಗ್ಯ ಪರಿಹಾರ ನೀಡುವುದು ಸರಕಾರದ ಕರ್ತವ್ಯ.

ಹಾಗೆ ಇಂತಹ ಘಟನೆಗಳು ನಡೆದಾಗ ಪಕ್ಷ ಭೇದ ಮರೆತು ಖಂಡಿಸಬೇಕಾದದ್ದು ಜವಾಬ್ದಾರಿಯುತ ರಾಜಕೀಯ ಪಕ್ಷಗಳ ಕರ್ತವ್ಯ. (ಆದರೆ ನಮ್ಮವರಿಗೆ ಇದರ ಬಗ್ಗೆ ಚರ್ಚೆ ಮಾಡೋದಕ್ಕಿಂತ ಒಂದು ಆತ್ಮಹತ್ಯೆ ಪ್ರಕರಣವನ್ನು ಸಿ ಬಿ ಐ'ಗೆ ಒಪ್ಪಿಸಬೇಕೆ ಬೇಡವೇ ಎಂಬ ಚಿಂತೆ ಹೆಚ್ಚಾದಂತೆ ಕಾಣುತ್ತಿದೆ. ಅವರದ್ದು ಸಿ ಬಿ ಐ ಗಾಗಿ ಹೋರಾಟ, ಇವರಿಗೆ ಸಿ ಓ ಡಿಯಲ್ಲೇ ತೃಪ್ತಿ. ಉದ್ದೇಶ ಸ್ಪಷ್ಟವಾಗಿದೆ! ಸ್ವಾಮೀ, ಆತ್ಮಹತ್ಯೆ ನಡೆದು ಹೋಗಿದೆ. ಆತ್ಮಹತ್ಯೆ ಮಾಡಿಕೊಂಡವರ ಆತ್ಮಕ್ಕೆ ಶಾಂತಿ ಸಿಗಲೆಂದು ಶುದ್ದ ಮನಸ್ಸಿನಿಂದ ಹಾರೈಸಿದರೆ, ಅದೇ ಆ ಜೀವಕ್ಕೆ ನೀಡೋ ಗೌರವ. ಅದು ಬಿಟ್ಟು ಕೇವಲ ರಾಜಕೀಯ ಲಾಭಗಳಿಗೋಸ್ಕರ ದಿನನಿತ್ಯ ಅದನ್ನು ಕಂಡಲ್ಲಿ ಪ್ರಸ್ತಾವಿಸಿ, ಅವರ ಕುಟುಂಬಕ್ಕೆ ಮತ್ತಷ್ಟು ನೋವು ನೀಡುವ ಕೆಲಸ ನಿಲ್ಲಲಿ.)

ಇಂತಹ ಸ್ಫೋಟಗಳು ಸಂಭವಿಸಿದಾಗ ಮತ್ತು ಮುಂದೆ ಆಗದಂತೆ ಸಾರ್ವಜನಿಕರು ಹೇಗೆ ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂಬ ಮಾಹಿತಿಯನ್ನು ಇಲಾಖೆ ನೀಡಿದರೆ ಉತ್ತಮ. ಹಾಗೆ ಹುಸಿ ಬಾಂಬ್ ಕರೆ ಮಾಡಿ ಶಾಲಾ ಮಕ್ಕಳಲ್ಲಿ ಕೂಡ ಭಯ ಹುಟ್ಟಿಸಿ ವಿಕೃತ ಸಂತೋಷ ಪಡುವ ಆಸಾಮಿಗಳನ್ನು ಕೂಡ ಭಯೋತ್ಪಾದಕರಂತೆ ಕೋಕಾ ಕಾಯ್ದೆಯಡಿ ಬಂಧಿಸಿದರೆ ಅಂತಹವರ ಚರ್ಬಿ ಪೂರ್ಣವಾಗಿ ಕರಗುತ್ತದೆ.

ಮುಂದೆ ಇಂತಹ ಭಯ ಹುಟ್ಟಿಸುವ ಮಲ್ಟಿ ನ್ಯಾಷನಲ್ ಕಂಪೆನಿಗಳ ಕಣ್ಣು ಹೋಟೆಲುಗಳ ಮೇಲೆ ಬಿಳದಿದ್ದರೆ ಸಾಕು! ಇಲ್ಲದಿದ್ದಲ್ಲಿ ಪೂರಿ, ವಡೆ, ಬಿಸ್ಕುಟ್ ಅಂಬಡೆ, ರಾಗಿ ಮುದ್ದೆ ತಿನ್ನುವ ಮೊದಲು ಲೋಹ ಶೋಧಕ ಸಾಧನಗಳನ್ನು ಬಳಸುವ ಕರ್ಮ ಎದುರಾದಿತು!!

ವರ್ಷಗಳ ಹಿಂದೆ ಕೇವಲ ಗುಂಡಿನ ಸದ್ದನ್ನು ಮಾತ್ರ ಕೇಳಿದ ಕರ್ನಾಟಕ, ಈಗ ಬಾಂಬ್'ಗಳ ಆರ್ಭಟವನ್ನು ಸಹಿಸಬೇಕಾಗಿದೆ. ಇಂತಹ ಕುಕೃತ್ಯಗಳನ್ನು ಚಿಗುರಿನಲ್ಲೇ ಚಿವುಟಿ ಹಾಕಿದರೆ ಉತ್ತಮ. ಇಲ್ಲದಿದ್ದರೆ........

ಇಂತಿ ನಿಮ್ಮ ಪ್ರೀತಿಯ,
ಅಧಿಕಪ್ರಸಂಗಿ

Friday, July 25, 2008

ರಾಜ್ಯ ರಾಜ್ಯಗಳಲ್ಲಿ ಮಾರಾಟ, ಎರಡು ಶ್ರೇಣಿಗಳಲ್ಲಿ ಮಾರಾಟ: ರಾಜಕೀಯದ ಬಿಗ್ ಬಜಾರ್!!

ಅಮ್ಮಾ ನಾ ಸೇಲಾದೆ,ಬಿಜೆಪಿ ಪಾಲಾದೆ ಎಂದು ಕಾಶೀನಾಥ್ ಶೈಲಿಯಲ್ಲಿ, ಬಿಜೆಪಿ ಸೇರಿದ ತುರುವೇಕೆರೆ ನವರಸ ನಾಯಕನನ್ನು ಜಾಡಿಸಿದ ಕಾಂಗ್ರೆಸ್, ದಿಲ್ಲಿಯ ಸಿಂಗರನ್ನು ಕಿಂಗ್ ಮಾಡಲು ಉತ್ತರ ಪ್ರದೇಶದ ಕುಳ್ಳ ಜನಾರ್ಧನ ರೆಡ್ಡಿಯ ಮೂಲಕ ಕರ್ನಾಟಕದ ಬಿಜೆಪಿ ತಂತ್ರವನ್ನು ಬಳಸಿದಾಗ, ನಮ್ಮ ನವರಸ ನಾಯಕ ಜಗ್ಗೇಶ್ ಸ್ವಲ್ಪ ಮಟ್ಟಿಗೆ ನೆಮ್ಮದಿಗೊಂಡರು... ಅವ್!! ಯಾಕೆಂದರೆ ಇನ್ನು ಅವರ ಮೇಲೆ ಸೇಲಾದ, ಪಾಲಾದ ಎಂದು ಆಪಾದಿಸುವವರ ಸಂಖ್ಯೆ ಸ್ವಲ್ಪ ಇಳಿಮುಖವಾಗಲಿದೆ ಎಂಬ ಆಶಯ... ಅವ್!!

ಹಿಂದೆಲ್ಲ ರೌಡಿಗಳಿಗೆ "ಮಾರೋ" "ಹುಡಿ" ಎಂದು ಪೋಲಿಸ್ ಜೀಪಿನ ಬಾನೆಟ್ ಮೇಲೇರಿ ಮಿಜೋರಮ್ ಶೈಲಿಯಲ್ಲಿ ಅಬ್ಬರಿಸುತ್ತಿದ್ದ ಸಾಂಗ್ಲಿಯಾನರಿಗೆ ಮೊನ್ನೆ ಲೋಕಸಭೆಯಲ್ಲಿ ತಮ್ಮ ಪಕ್ಷದವರೇ ತನಗೆ "ಮಾರೋ" ಎನ್ನುತ್ತಾ ಮೇಲೆರೆಗಿದ್ದು ನೋಡಿ ಸದನದ ಡೆಸ್ಕ್ ಹತ್ತಲು ಯೋಚನೆ ಮಾಡಿದ್ದು ಸುಳ್ಳು ಅಂತೀರಾ :)? ಕನ್ನಡದ ಕಟ್ಟಾಳು ಶಿವಣ್ಣ ಕೂಡ?!! ಛೆ!ಛೆ! ನಾಗಾರ್ಜುನಕ್ಕೆ ತಡೆಯೊಡ್ಡಿಲ್ಲ ಎಂಬ ಕಾರಣ ನೈಜವಾದರೂ, ಪುತ್ರ ಮುಂದಿನ ಕಾಂಗ್ರೆಸ್ ಅಭ್ಯರ್ಥಿ ಎಂಬ ಕಾರಣಕ್ಕೆ ತಟಸ್ಥರಾದ ನೇರ ನುಡಿಯ ಉಡುಪಿಯವರಿಗೆ ಸೊರಬದಲ್ಲಿ ಕುಟುಂಬ ರಾಜಕಿಯಕ್ಕಾದ ಗತಿ ನೆನಪಿಗೆ ಬಾರದಿದದ್ದು ವಿಪರ್ಯಾಸ!!

ರಾಜ್ಯದಲ್ಲಿ ಎಂ.ಎಲ್.ಎ ಮತ್ತು ಎಂ.ಪಿ ಎಂಬ ಎರಡು ಶ್ರೇಣಿಗಳಲ್ಲಿ ಮಾರಾಟಗೊಂಡ ನಮ್ಮ ರಾಜಕಾರಣಿಗಳು, ಇಂದಿನ ರಾಜಕೀಯ ಹಣ ಗಳಿಸುವ ದಂಧೆಯಾಗಿ ಮಾರ್ಪಟ್ಟಿದೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಚುನಾವಣಾ ಸಮಯದಲ್ಲಿ "ಇನ್ವೆಸ್ಟ್ " ಗೆದ್ದ ಮೇಲೆ "ಹಾರ್ವೆಸ್ಟ್" ಎಂಬ ತತ್ವಕ್ಕೆ ಅಂಟಿಕೊಂಡಿರುವ ಈ ಮಂದಿಯ ಬಾಯಲ್ಲಿ ಕ್ಷೇತ್ರದ ಹಿತ, ರಾಜ್ಯದ ಹಿತ ಮತ್ತು ರಾಷ್ಟ್ರದ ಹಿತ ಎಂಬ ಪದಗಳು ಉದುರಿದಾಗ ಇದನ್ನು ನಂಬುವವರ ಬಗ್ಗೆ ಕನಿಕರ ಮೂಡುತ್ತದೆ.

ಪಕ್ಷಾಂತರಕ್ಕೆ ೧೦ ರಿಂದ ೩೦ ಕೋಟಿ ಡಿಮಾಂಡ್ ಮಾಡುವ ಎಂ ಎಲ್ ಏಗಳು, ೫೦ ರಿಂದ ೧೦೦ ಕೋಟಿ ಡಿಮಾಂಡ್ ಮಾಡುವ ಎಂ.ಪಿಗಳು, ಹಣ ಪಡೆದ ನಂತರ ಮುಂದಿನ ಚುನಾವಣೆವರೆಗೆ ಯಾವುದೇ ಡೀಲ್ 'ಗಳಿಗೆ ಕೈಹಾಕದೆ ಇದ್ದಲ್ಲಿ ಆ ಕ್ಷೇತ್ರದ ಮತದಾರರು ನಿಟ್ಟುಸಿರು ಬಿಟ್ಟಾರು. ಹೀಗಾದಲ್ಲಿ ಅದು ಮತದಾರರಿಗೆ ಮಾಡುವ ಉಪಕಾರವಾದಿತು. ಆದರೆ ಅವರಿಗೆ ಹಣ ನೀಡಿದವ, ನೀಡಿದ ಹಣದ ಬದಲಿಗೆ ರಾಜ್ಯವನ್ನೇ ಕೊಳ್ಳೆ ಹೊಡೆಯಲು ಮುಂದಾದರೆ? ಯಾರಾದರು ಹಣ ಸುಮ್ಮನೆ ಚಲ್ಲುತ್ತಾರೆಯೆ? ರಾಜ್ಯದಲ್ಲಿ ಈಗ ಆಗುತ್ತಿರುವುದು ಅದೇ ಅಂತೀರಾ ? :) ಹಾಗಾಗದಿರಲಿ ಎಂದು ಆಶಿಸೋಣ(ಅಶಿಸೋದು ಬಿಟ್ಟು ಬೇರೆ ದಾರಿ ಇಲ್ಲ )

ಐಪಿಎಲ್' ಪಂದ್ಯಾವಳಿಗೆ ಹರಾಜುಗೊಳ್ಳುವ ನಮ್ಮ ಕ್ರಿಕೆಟಿಗರಂತೆ, ಮುಂದೆ ಸರ್ಕಾರ ರಚಿಸಲು ಎಂ.ಎಲ್.ಎ ಮತ್ತು ಎಂ.ಪಿಗಳ ಹರಾಜು ಪ್ರಕ್ರಿಯೆ ಸಕ್ರಮಗೊಳ್ಳಬಹುದು. ಯಾರಿಗೂ ಸ್ಪಷ್ಟ ಬಹುಮತ ಬಾರದಿದ್ದಲ್ಲಿ ಸರಕಾರ ರಚಿಸಲು ಎಂಟ್ಹತ್ತು ಪಕ್ಷಗಳ/ಗುಂಪುಗಳ ಕಸರತ್ತು. ಯಾರು ಅಧಿಕ ಶಾಸಕ / ಎಂಪಿಗಳನ್ನು ಖರಿದಿಸುತ್ತಾರೋ ಅವರದೇ ಸರಕಾರ!! ಆ ಸರಕಾರಕ್ಕೊಂದು ಹೆಸರು!! ಉದಾ: ಬಳ್ಳಾರಿ ಚ್ಯಾಲೆಂಜೆರ್ಸ್, ಹಾಸನ್ ಸೂಪರ್ ಕಿಂಗ್ಸ್, ಸಿದ್ದುಸ್ ನೈಟ್ ರೈಡೆರ್ಸ್ , ಶಿಕಾರಿಪುತ್ತೂರ್ ಡೆರ್ಡೇವಿಲ್ಸ್, ಧರ್ಮುಸ್ ಚಾರ್ಜರ್ಸ್, ಖರ್ಗೆಸ್ ಸ್ಲೀಪಿಂಗ್ ರಾಯಲ್ಸ್ ಮತ್ತು ಕೃಷ್ನಾಸ್ ಸಿಂಗಾಪುರ್ ಡ್ರೀಮ್ಸ್ !! ಸೆಮಿಫೈನಲ್, ಫೈನಲ್'ಗಳ ಜಂಜಾಟವಿಲ್ಲ.....ಸಿದಾ ವಿಧಾನಸೌಧಕ್ಕೆ.

ಯಾರ್ಯಾರ್ ಅದೃಷ್ಟ ಹ್ಯಾಗ್ ಹ್ಯಾಗ್ ಇದಿಯೋ ಯಾರಿಗೊತ್ತು ಸ್ವಾಮಿ. ಇದೆಲ್ಲದರ ಮಧ್ಯೆ ಓಟು ನೀಡುವ ಮತದಾರನಿಗೆ ಒಂದು ಓಟಿಗೆ ಕನಿಷ್ಠ ಮತ್ತು ಗರಿಷ್ಠ (ಕ್ಷೇತ್ರ ಮತ್ತು ಅಭ್ಯರ್ಥಿಯ ಹಣಬಲ ಹೊಂದಿಕೊಂಡು)ಮೊತ್ತ ಗೊತ್ತು ಮಾಡಿ ಚುನಾವಣೆಗೆ ಇಳಿದರೆ.........ಇದರ ಮುಂದೆ ಐಪಿಎಲ್'ನ 20 20ಯಾವ್ ಲೆಕ್ಕ ಸ್ವಾಮಿ?!!

ಇಂತಿ ನಿಮ್ಮ ಪ್ರೀತಿಯ,
ಅಧಿಕಪ್ರಸಂಗಿ

Thursday, May 15, 2008

ರಾಯಲ್ ಚಾಲೆಂಜರ್ಸ್: ಅಡಿದ್ದಕ್ಕಿಂತ ತೂರಾಡಿದ್ದೆ ಹೆಚ್ಚು !!



ತಂಡ ಆಯ್ಕೆ ಮಾಡಿದಾಗಲೇ ಹಲವರು ಹುಬ್ಬೇರಿಸಿದ್ದರು. ಕೊನೆಗೂ ಅಂದುಕೊಂಡಂತೆ ಅಯಿತು!! ಸೋಲಿನ ಮೇಲೆ ಸೋಲು..ಅದರ ಮೇಲೆ ಇನ್ನೊಂದು ಸೋಲು! ಹೀಗೆ ಸೋಲಿನ ಸರಪಳಿಯ ನಡುವೆ ದೃಷ್ಟಿ ಅಗಬಾರದೆಂದು ಒಂದೆರೆಡು ಗೆಲುವು!

ಮೊದಲ ಪಂದ್ಯದಲ್ಲಿ ಕೊಲ್ಕೋತ ತಂಡದ ಬೃಹತ್ ಮೊತ್ತವನ್ನು ಬೆನ್ನಟ್ಟಲು ಹೊರಟ ಬೆಂಗಳೂರು ತಂಡದಿಂದ ಆರಂಭಿಕರಾಗಿ ಯಾರು ಬರುತ್ತಾರೆಂಬ ಕೂತೂಹಲವಿತ್ತು. ಆದರೆ ದ್ರಾವಿಡ್ ಮತ್ತು ಜಾಫರ್ ಹೆಗಲ ಮೇಲೆ ಬ್ಯಾಟ್ ಹೊತ್ತುಕೊಂಡು ಬಂದದ್ದು ನೋಡಿ ನಗು ತಡೆಯಲಾಗಲಿಲ್ಲ. ನನಗೆ ಅವರು ಆಟಗಾರಿಗಿಂತ ಕಾಡಿಗೆ ಕಟ್ಟಿಗೆ ಕಡಿಯಲು ಹೆಗಲ ಮೇಲೆ ಕೊಡಲಿ ಹೊತ್ತು ಹೊರಟ ಕಿಟ್ಟು-ಪುಟ್ಟುವಿನಂತೆ ಕಂಡುಬಂದರು!! ಮೊದಲ ರನ್ ಗಳಿಸಲು ಕನಿಷ್ಠ ಎರಡು ಓವರಗಳನ್ನು ಕಬಳಿಸುವ ಚಟವಿರುವ ಇಬ್ಬರು ಮೊದಲ ಓವರುಗಳಲ್ಲಿ ಉತ್ತಮ ಆರಂಭ ನಿಡಲು ವಿಫಲರಾದರು . ದ್ರಾವಿಡ್ ಮೂರು ಬಾಲಗಳಲ್ಲಿ ಎರಡು ರನ್ ಗಳಿಸಿ ಔಟ್ ಆದರೆ ಜಾಫರ್ ಭಾಯಿ ಹದಿನಾರು ಬಾಲುಗಳಲ್ಲಿ ಆರು ರನ್ ಗಳಿಸಿ ಔಟಾದರು. ಮುಂದೆ ಬಂದವರು ಕ್ರಿಸ್ನಲ್ಲಿ ನಿಂತರೆ ಸಿಡಿಲು ಬಡಿಯಬಹುದು ಎಂಬ ಹೆದರಿ ಬೇಗ ಬೇಗನೆ ಪೆವಿಲಿಯನ್ ಸೇರಿಕೊಂಡರು. ಅಂತೂ ೧೪೦ ರನ್ನುಗಳ ಬೃಹತ್ ಅಂತರದಿಂದ ತಂಡ ಸೋಲೊಪ್ಪಿಕೊಂಡಿತು.ಮುಂದಿನ ಪಂದ್ಯಗಳಲ್ಲಿ ಇದೆ ತೆರೆನಾದ ಪ್ರದರ್ಶನ ಮತ್ತು ಅದೇ ಫಲಿತಾಂಶ. ಮಧ್ಯೆ ಒಂದೆರೆಡು ಗೆಲುವುಗಳು ಹಳದಿ ಕೆಂಪು ಧಿರುಸಿನ ಮೇಲೆ ಭರವಸೆ ಮೂಡಿಸಿದರೂ ಮುಂದೆ ಮತ್ತದೇ ಹಳೆ ಚಾಳಿ.

ಶಿವನಾರಾಯಣ್ ಚಂದ್ರಪಾಲ್, ವಾಸಿಂ ಜಾಫರ್ ಮತ್ತು ಸುನಿಲ್ ಜೋಶಿಯನ್ನು ಈ ರೀತೀಯ ಪಂದ್ಯಾವಳಿಗೆ ದ್ರಾವಿಡ್ ಹೇಗೆ ಆಯ್ಕೆ ಆಯ್ಕೆ ಮಾಡಿದರೋ ದೇವರೇ ಬಲ್ಲ. ಜೋಶಿ ರಣಜಿಯಲ್ಲಿ ಉತ್ತಮ ಸಾಧನೆ ತೋರಿದರೂ, ಚಿನ್ನಸ್ವಾಮಿ ಕ್ರೀಡಾಂಗಣ ತನ್ನ ಮನೆಯಂಗಣವಾದರೂ ಉತ್ತಮ ಪ್ರದರ್ಶನ ತೋರಲಿಲ್ಲ. ಅನಿಲ್ ಕುಂಬ್ಳೆ ಸ್ವತಃ ಆಯ್ಕೆಯಿಂದ ಹೊರಗುಳಿಯುತ್ತಿದ್ದರೆ ಮಾನ ಉಳಿಸಿಕೊಳ್ಳುತ್ತಿದ್ದರು. ಅವರ ಇತಿ ಮಿತಿಗಳು ಅವರಿಗೆ ತಿಳಿಯಬೇಕಿತ್ತು. ಭರತ್ ಚಿಪ್ಲಿ ಸಿಕ್ಕಿದ ಅವಕಾಶ ಬಳಸಿಕೊಳ್ಳಲಿಲ್ಲ. ಕಾಲಿಸ್ ದ್ರಾವಿಡ್ ಮೇಲೆ ಮುನಿಸಿಕೊಂಡವರಂತೆ ನಿರಸ ಆಟ ಪ್ರದರ್ಶಿಸಿದರು. ಮಲ್ಯರ ನೆಚ್ಚಿನ ಮಿಸ್ಬಾ ಉಲ್ ಹಕ್ ಕಡಿದು ಗುಡ್ಡೆ ಹಾಕಿದ್ದು ಎಲ್ಲರು ನೋಡಿದ್ದಾರೆ. ಬೌಲರ್ 'ಗಳು, ಮೊದಲ ಪಂದ್ಯವೊಂದನ್ನು ಬಿಟ್ಟು ಮತ್ತೆಲ್ಲ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಉಪಯೋಗವಾಗಲಿಲ್ಲ.

ಮತ್ತೆ ಚಾರು ಶರ್ಮಾ!! ಸ್ವಾಮಿ, ಆತನ ಕ್ರಿಕೆಟ್ ಜ್ಞಾನ, ಗೆಳತಿ ಮಂದಿರಾ ಬೇಡಿಯ ಸೀರೆ ಸೆರೆಗಿನಷ್ಟೇ ತೆಳು!! ಆತ ತಂಡದ ಸಿ ಇ ಓ (ಹೋ) !!

ಇವರ ಈ ಆಟದ ಪರಿ ನೋಡಿ ಜನ ಉಗಿಯಲು ಶುರುಹಚ್ಚಿಕೊಂಡ ಕೂಡಲೇ ಮಲ್ಯ ಇದು ನನ್ನ ಆಯ್ಕೆಯ ತಂಡವಲ್ಲ ಎಂಬ ಬಾಂಬ್ ಸಿಡಿಸಿದರು. ಇವತ್ತಿನ ವರದಿಯಲ್ಲಿ ಮಲ್ಯರ ಸ್ನೇಹಿತರ ಪ್ರಕಾರ ಮಲ್ಯಗೆ, ಧೋನಿ ಮತ್ತು ಉತ್ತಪ್ಪರನ್ನು ತಂಡಕ್ಕೆ ಸೇರಿಸಿಕೊಳ್ಳುವ ಹಂಬಲ ಇತ್ತತಂತೆ, ಆದರೆ ದ್ರಾವಿಡ್ ಮತ್ತೆ ಚಾರು ಶರ್ಮಾ ತಡೆದರಂತೆ!! ಅಂತೂ ದ್ರಾವಿಡ್ ಹೋದಲೆಲ್ಲ "ಹರಕೆಯ ಕುರಿ"ಯಾಗುತ್ತಿದ್ದಾರೆ!!

ಹಾಗೆ ಈ ತಂಡದ ಮೇಲಿನ ಇನ್ನೊಂದು ಅರೋಪವೆಂದರೆ "ತಂಡದ ಆಟಗಾರರ ನಡುವೆ ಐಕ್ಯತೆ, ಭಾಂಧವ್ಯ ( Bonding)ಇಲ್ಲ" ಎಂಬುದು. ಈ ಆರೋಪ ನಿವಾರಿಸಲು ಒಂದು ಉಪಾಯ ಇದೆ!! ಮುಂದಿನ ಬಾರಿ ತಂಡದ ಹೆಸರನ್ನು "ಯು ಬಿ ಬೆಂಗಳೂರು" (United Beverages, Bengaluru) ಎಂದು ಮರುನಾಮಕರಣ ಮಾಡೋದು. ಯಾಕಂದ್ರೆ ಹೆಸರಿನಲ್ಲೇ ಐಕ್ಯತೆ ಇದ್ರೆ ತಂಡದಲ್ಲಿ ಇನ್ನು ಎಷ್ಟಿರಬೇಡ ಹೇಳಿ ? ಅಲ್ವಾ? ಮತ್ತೆ ಅದು ಆರ್ ಸಿ ಯಷ್ಟು ಸ್ಟ್ರಾಂಗ್ ಕೂಡ ಅಲ್ಲ ಎಂಬ ಹೆಗ್ಗಳಿಕೆ ಬೇರೆ!! ಸ್ಟ್ರಾಂಗ್ ಕಿಕ್'ಗಿಂತ ಲೈಟ್ ಕಿಕ್'ನಲ್ಲಿ ಮಜಾ ಜಾಸ್ತಿ ! ಫಿಲ್ಡಿಂಗ್ ಮಾಡೋವಾಗ ಡೈವ್ ಹೊಡೆದರೂ ರಪ್ಪ (ಬೇಗ) ಮೆಲೇಳಬಹುದು ನೋಡಿ!! ಒಂಟಿ ರನ್ (Cheeky Single) ಕದಿಯುವ ಭರದಲ್ಲಿ ಕ್ರಿಸ್ ಸಮಿಪಿಸುತ್ತಿದ್ದಂತೆ ಅಯತಪ್ಪಿ ಮುಗ್ಗರಿಸಿ ಬಿದ್ದರೂ "ಎಂತಹ ಕಮಿಟ್ಮೆಂಟ್" ಎಂದು ಹೊಗಳಿಕೆ ಬೇರೆ ಸಿಗುತ್ತೆ ! ಅಲ್ವಾ?! ಅದಕ್ಕೆ UB ಓಕೆ, RC ಯಾಕೆ ?

ಏನೇ ಅಗಲಿ ಮುಂದಿನ ಪಂದ್ಯಗಳಲ್ಲಾದರು (ಇಲ್ಲದಿದ್ದರೆ ಮುಂದಿನ ವರ್ಷವಾದರು) ತಂಡ ಗೆಲ್ಲಲಿ, ತಾವು ಧರಿಸುವ ಕೆಂಪು ಹಳದಿಯ ಬಣ್ಣಕ್ಕೆ ಮೈದಾನದಲ್ಲಿ ಮರ್ಯಾದೆ ಸಿಗುವಂತೆ ಮಾಡಲಿ ಎಂದು ಹಾರೈಸೋಣ....ಚಿಯರ್ಸ್.

ಇಂತಿ ನಿಮ್ಮ ಪ್ರೀತಿಯ,
ಅಧಿಕಪ್ರಸಂಗಿ

Sunday, April 27, 2008

ಈ ಸಾರಿಯಾದ್ರು ಬಿಜೆಪಿಗೆ ಬಹುಮತ ಸಿಗಬಹುದಾ ಮಾರಾಯರೇ..?

ಈ ಸಾರಿಯಾದ್ರು ಬಿಜೆಪಿಗೆ ಬಹುಮತ ಸಿಗಬಹುದಾ ಮಾರಾಯರೇ...? ಹೇಳೋಕ್ಕೆ ಆಗಲ್ಲ ಗುರು, ಮ್ಯಾಜಿಕ್ ಫಿಗರ್ಗಿಂತ ೧೦ -೧೫ ಸೀಟು ಕಮ್ಮಿ ಬಂದ್ರೂ ಬರಬಹುದು...ಏನಪ್ಪಾ ಯಶವಂತಪುರದ ಕಡೆ ಹೋಗಿ ಮ್ಯಾಜಿಕ್ ಫಿಗರ್ ಗಿಗರ್ ಅನ್ನಬ್ಯಾಡ, ಕಡೆಗೆ ಭಜ್ಜಿ ಶ್ರಿಶಾಂತನಿಗೆ ಇಕ್ಕಿದಂಗೆ ಇಕ್ಕಿಯಾರು! ಇಲ್ಲಾ ಸ್ವಾಮಿ ಈ ಬಾರಿ ಮತ್ತೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರಕ್ಕಾಗಿ ಕಿಚಡಿಯಾಗ್ತಾವೆ ನೋಡ್ತಾ ಇರಿ !! (ಜನರ ಅಂಬೋಣ)

ಮಾಯಾವತಿಯ ಆನೆ, ಬಂಗಾರಪ್ಪನವರ ಸೈಕಲ್, ಮುತಾಲಿಕರ ಸೇನೆ ಮತ್ತು ಬಂಡಾಯಗಾರರ ಬಾಂಬ್ ಈ ಬಾರಿ ಚುನಾವಣೆ ಎಂಬ ಉಪ್ಕರಿಗೆ ಕೊತ್ತೊಂಬ್ರಿ ಸೊಪ್ಪು, ಇರುಳ್ಳಿ ಹಚ್ಚುವ ಕೆಲಸ ಮಾಡಲಿವೆ. ಅಂತೂ ಭಜ್ಜಿಯ ಕಾಪಾಳಮೋಕ್ಷಕ್ಕೆ ಕೆಂಪೆರಿದ ಶ್ರಿಶಾಂತನ ಮೊಗದಂತೆ ಕರ್ನಾಟಕದ ರಾಜಕೀಯ ಚುನಾವಣೆಯ ರಂಗೆರಿಸಿಕೊಂಡಿದೆ.

ಈ ಬಾರಿಯ ಚುನಾವಣೆ ಕನ್ನಡಿಗರ ಪಾಲಿಗೆ ಮಹತ್ವದ್ದಾಗಿದೆ. ಗಡಿ ವಿವಾದಗಳ ಹೊಗೆ ಕವಿದಿರುವ ಈ ಸಂದರ್ಭದಲ್ಲಿ ರಾಜ್ಯದ ಹಿತ ಕಾಪಾಡುವ ಸರಕಾರವೊಂದನ್ನು ಸ್ಥಾಪಿಸುವ ಜವಾಬ್ದಾರಿ ಕನ್ನಡಿಗರ ಪಾಲಿಗೆ ಇದೆ. ಕನ್ನಡಿಗರದ್ದೇ ಎಂದು ಹೇಳಿಕೊಳ್ಳುವ ಒಂದೇ ಒಂದು ಪ್ರಾದೇಶಿಕ ಪಕ್ಷ ಅಸ್ಥಿತ್ವದಲ್ಲಿ ಇಲ್ಲದಿರುವುದರಿಂದ ಕನ್ನಡಿಗರು ಇರುವ ಎರಡು ಮೂರು ರಾಷ್ಟ್ರೀಯ ಪಕ್ಷಗಳಲ್ಲಿ ಯಾವುದಾದರೊಂದನ್ನು ಆರಿಸುವುದು ಅನಿವಾರ್ಯ.

ಹಿಂದಿನಿಂದಲೂ ಎಲ್ಲ ಕೇಂದ್ರ ಸರಕಾರಗಳು ನಮ್ಮ ರಾಜ್ಯವನ್ನು ನಿರ್ಲಕ್ಷಿಸುತ್ತಲೇ ಬಂದಿವೆ. ಆದರೆ ಈಗಿನ ಕೇಂದ್ರ ಸರ್ಕಾರವಂತೂ ಹಟಕ್ಕೆ ಬಿದ್ದಂತೆ ಕರ್ನಾಟಕದ ಹಿತವನ್ನು ಮೂಲೆಗುಂಪು ಮಾಡಿದೆ. ಬರ ಪರಿಹಾರವಿರಲಿ, ನೆರೆ ಪರಿಹಾರವಿರಲಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿಕೆ ಪ್ರಶ್ನೆ ಇರಲಿ, ಗಡಿವಿವಾದವಿರಲಿ ಎಲ್ಲದರಲ್ಲೂ ಅನ್ಯಾಯವನ್ನೇ ಎಸಗಿದೆ. ಅನ್ಯ ರಾಜ್ಯದ ಮಿತ್ರ ಪಕ್ಷಗಳ ಒತ್ತಡಕ್ಕೆ ಮಣಿದು ಅದು ತನ್ನ ಅಸಾಮರ್ಥ್ಯನ್ನು ಮೆರೆದಿದೆ. ಆದುದರಿಂದ ಸಹಜವಾಗಿಯೇ ಕಾಂಗ್ರೆಸ್ ಕನ್ನಡ, ಕರ್ನಾಟಕ ಪರ ನಿಲುವು ತಳೆಯಲು ವಿಫಲವಾಗಿದೆ. ಕರ್ನಾಟಕದ ನರೆ ರಾಜ್ಯಗಳಲ್ಲಿ ಕಾಂಗ್ರೆಸ್ ಬಲವಾಗಿರುವುದರಿಂದ, ಕರ್ನಾಟಕದ ಕಾಂಗ್ರೆಸ್ ಘಟಕಕ್ಕೆ ಅವುಗಳ ವಿರುದ್ದ ಕಠಿಣವಾಗಿ ವರ್ತಿಸುವ ಹಕ್ಕನ್ನು ಹೈಕಮಾಂಡ್ ನಿಡುತ್ತಿಲ್ಲ. ಅಂದರೆ ಅದರ ಎಲ್ಲ ನಿಲುವುಗಳು ದೆಹಲಿ ಮುಖಂಡರ ಆಜ್ಞೆಯ ಮೇಲೆ ಅವಲಂಬಿತವಾಗಿದೆ.

ಆದರೆ ಬಿಜೆಪಿಯ ಇತ್ತೀಚಿನ ಕೆಲವು ಕನ್ನಡಪರ ನಿಲುವುಗಳು ಈ ನಿಟ್ಟಿನಲ್ಲಿ ಅಶಾದಾಯಕವಾಗಿದೆ. ಚುನಾವಣೆ ಅದಕ್ಕೆ ಕಾರಣವಾದರು ಸಂಸತ್ತಿನಲ್ಲಿ ಅದು ಕೆಲವೊಮ್ಮೆ ರಾಜ್ಯ ಪರ ಹೋರಾಟ ಮಾಡಿದ್ದನ್ನು ನಿರ್ಲಕ್ಷಿಸುವಂತಿಲ್ಲ. ದಕ್ಷಿಣದಲ್ಲಿ ಅದಕ್ಕೆ ನೆಲೆ ಇರುವುದು ಕರ್ನಾಟಕದಲ್ಲಿ ಮಾತ್ರ. ಆದುದರಿಂದ ಅದು ಸಹಜವಾಗಿಯೇ ಕರ್ನಾಟಕ ಪರವಾಗಿರಬೇಕು. ಮುಂದೆ ಅದು ಕೇಂದ್ರದಲ್ಲಿ ಅಧಿಕಾರ ಪಡೆದರೆ ಮತ್ತು ಅದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದರೆ ರಾಜ್ಯಕ್ಕೆ ಏನಾದರೂ ಉತಮವಾದದ್ದನ್ನು ನಿರೀಕ್ಷಿಸಬಹುದು. ಸರಕಾರ ರಚಿಸಲು ಅನ್ಯ ರಾಜ್ಯದ ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆದರು ಕೂಡ ಈಗಿನ ಕೇಂದ್ರ ಸರಕಾರದ ವರ್ತನೆಗಿಂತ ಉತ್ತಮವಾಗಿ ಇರುವುದರಲ್ಲಿ ಯಾವುದೇ ಸಂಶಯವಿಲ್ಲ. ಆದುದರಿಂದ ಬಿಜೆಪಿ ಇತರ ಪಕ್ಷಗಳಿಗಿಂತ ಕನ್ನಡಿಗರಿಗೆ ಹತ್ತಿರವಾಗಿದೆ.

ಮತ್ತೆ ಜೆಡಿಎಸ್ ಎಂಬ ಪಕ್ಷ ಇಗಲೇ ೨೦ರಿಂದ ೨೫ ಶಾಸಕರನ್ನು ಹೊಂದಿ ಮುಂದಿನ ಸರಕಾರವನ್ನು ಅಲುಗಾಡಿಸುತ್ತೆವೆಂದು ಕನ್ನಡಿಗರನ್ನು ಹೆದರಿಸುತ್ತಿರುವುದರಿಂದ ಅದರ ಬಗ್ಗೆ ಮಾತು ಅನಗತ್ಯ.

ಎಲ್ಲ ಅಂಶಗಳನ್ನು ಗಮನಿಸಿದರೆ ಬಿಜೆಪಿ ಕರ್ನಾಟಕಕ್ಕೇ ಒಂದು ಉತ್ತಮ ಕನ್ನಡ ಪರ ಸರಕಾರ ನೀಡಬಲ್ಲದೆಂದು ನನ್ನ ಅನಿಸಿಕೆ. ಅದಕ್ಕೆ ಸ್ಪಷ್ಟ ಬಹುಮತದ ಅಗತ್ಯ ಇದೆ. ಅದನ್ನು ಕನ್ನಡಿಗರು ಮನಸ್ಸು ಮಾಡಿದರೆ ನೀಡಬಹುದು. ಇಲ್ಲದಿದ್ದಲ್ಲಿ ಕಳೆದ ಬಾರಿಯಂತೆ ಸಮ್ಮಿಶ್ರ ಸರಕಾರದಿಂದ ರಾಜ್ಯದ ಮಾನ ಹರಾಜಾಗುವುದು ಖಂಡಿತ.

ಹೆಣ್ಣಿರಲಿ, ಗಂಡಿರಲಿ ಮಕ್ಕಳೆರೆಡೆ ಇರಲಿ ಎನ್ನುವಂತೆ, ಬಿಜೆಪಿ ಇರಲಿ ಕಾಂಗ್ರೆಸ್ ಇರಲಿ ಕರ್ನಾಟಕದಲ್ಲಿ ಒಂದೆ ಪಕ್ಷ ಆಡಳಿತ ನಡೆಸಲಿ.

ಇಂತಿ ನಿಮ್ಮ ಪ್ರೀತಿಯ,
ಅಧಿಕಪ್ರಸಂಗಿ

Wednesday, April 9, 2008

ರಜನಿ, ಕನ್ನಡಿಗರ ಪಾಲಿಗೆ ಘಜನಿ!

ಹೊಗೆನಕಲ್ ವಿವಾದ ಕನ್ನಡಿಗರ ಪಾಲಿಗೆ ಹಲವು ನಟರ ವೇಷ ಕಳಚಿಸಿದ ಸಾಧನವಾಯಿತು. ಇದರಲ್ಲಿ ಪ್ರಮುಖವಾದದ್ದು ಇತ್ತೀಚಿನವರೆಗೂ ತನ್ನ ಜನಪ್ರಿಯತೆಗೆ ಹೆದರಿ ಮಾರುವೇಷದಲ್ಲಿ ಬೆಂಗಳೂರಿನಲ್ಲಿ ಓಡಾಡಿ ಕುಷಿಪಡುತ್ತಿದ್ದ ನಮ್ಮವನೆ ಎಂದು ಕನ್ನಡಿಗರು ಹಿಂದೆ ಹೆಮ್ಮೆಪಡುತ್ತಿದ್ದ ಒಂದಾನೊಂದು ಕಾಲದ ಬಿಟಿಎಸ್ ಬಸ್ ನಿರ್ವಾಹಕ ಶಿವಾಜಿರಾವ್ ಗಾಯಕ್’ವಾಡ್ ಅಲಿಯಾಸ್ ರಜನಿಕಾಂತ್.

ಹೊಗೆನೆಕಲ್ ಯೋಜನೆ ನಿಲ್ಲಿಸಲು ಹೋರಾಟ ಮಾಡುವ ಕನ್ನಡಿಗರನ್ನು ಒದೆಯಬೇಡ್ವೆ ಎಂದು ವಿರಾವೇಶದಲ್ಲಿ ಒದರಿದ ಆಸಮಿ ಮರುದಿನ ತಾನು ಆ ಅರ್ಥದಲ್ಲಿ ಹೇಳೆ ಇಲ್ಲವೆಂದು ಉಲ್ಟ ಹೊಡೆಯೊದಾ!! ಅದೂ ಅಲ್ದೆ ಇವರು,ಇವರು,ಇವರು ಮತ್ತು ಇವರು ಹೇಳಿದರೆ ಮಾತ್ರ ಕ್ಷಮೆ ಯಾಚಿಸುತ್ತೆನೆಂದು ಗಾಯದ ಮೇಲೆ ಬರೆ ಎಳೆದರು. ತನ್ನ ಚಿತ್ರ ಬಹಿಷ್ಕರಿಸಿದರೆ ಕನ್ನಡಿಗರಿಗೆ ನಷ್ಟ ಎಂದು ಹೇಳಿ ಕನ್ನಡಿಗರ ಉಸಿರು ಈ ಶಿವಾಜಿರಾವ್ ಗಾಯಕ್ವಾಡ್’ನ ಚಿತ್ರದಲ್ಲಿ ಅಡಗಿದೆಯಾ ಎಂಬ ಅನುಮಾನ ಹುಟ್ಟಿಸಿದರು. ಈ ಮನುಷ್ಯನಿಗೆ ೨೫ ವರ್ಷಗಳ ಹಿಂದೆ ಕಿಕ್ಕಿರಿದ ಬಸ್ಸಿನಲ್ಲಿ ಪ್ರಯಾಣಿಕರ ಮೇಲೆ ರೆಗಾಡುತ್ತಿದ್ದ ಬುದ್ದಿ ಮತ್ತೆ ಮರುಕಳಿಸಿತಾ? ಎಂಥಾ ಚಿಲ್ರೆ ಮನುಷ್ಯ ಸ್ವಾಮಿ!!

ಇದೆಲ್ಲ ನೋಡಿದರೆ ಕನ್ನಡಿಗ ತನ್ನ ಅನ್ಯ ಭಾಷಾ ಪ್ರೇಮದಿಂದ ಯಾವ ಸ್ಥಿತಿಗೆ ತನ್ನನ್ನು ತಾನು ತಂದುಕೊಂಡಿದ್ದಾನೆಂದು ಸ್ಪಷ್ಟವಾಗುತ್ತದೆ. ಇವತ್ತು ಬೆಂಗಳೂರಿನಲ್ಲಿ ಎಐಡಿಂಕೆ ಎನ್ನುವ ತಮಿಳು ಪಕ್ಷ ೬ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆಯೆಂದರೆ ಬೆಂಗಳೂರಿನಲ್ಲಿ ತಮಿಳರ ಪ್ರಾಬಲ್ಯ ಯಾವ ಮಟ್ಟಕ್ಕೆ ಬೆಳದಿದೆ ನೋಡಿ. ನಾಳೆ ಇವರಲ್ಲಿ ಕನಿಷ್ಟ ಒಂದಿಬ್ಬರು ಆಯ್ಕೆಯಾದರು ಕನ್ನಡಿಗರಿಗೆ ತಲೆನೊವು ನಿಶ್ಚಿತ. ಇವರ ಬೆನ್ನ ಹಿಂದೆ ಶಿವಾಜಿರಾವ್’ನಂತಹ ನಟರು ಇದ್ದೆ ಇರುತ್ತಾರೆ.

ಇದೆನೆಲ್ಲ ನೋಡಿಯು ಕನ್ನಡಿಗರು ಸುಧಾರಿಸದಿದ್ದರೆ ಹೇಗೆ? ಕನ್ನಡಿಗರಿಗೆ ಈಗ ತಮ್ಮ ತಪ್ಪಿನ ಅರಿವಾಗಿದೆ ಎಂದು ಯಾರಾದರು ಉಲಿದರೆ ಅದಕ್ಕಿಂತ ಸಂತೋಷದ ಸುದ್ದಿ ಇನ್ನೋಂದಿಲ್ಲ. ರಜನಿಯಂತಹ ಘಜನಿಯನ್ನು ಪುಡಿಗಟ್ಟುವ ಸಾಮರ್ಥ್ಯ ಕನ್ನಡಿಗರಿಗೆ ಖಂಡಿತ ಇದೆ. ಮೊದಲು ಕನ್ನಡ ಆಮೇಲೆ ಇನ್ನೆಲ್ಲ.

ಇಂತಿ ನಿಮ್ಮ ಪ್ರೀತಿಯ,
ಅಧಿಕಪ್ರಸಂಗಿ