ನಾವು ಕನ್ನಡಿಗರಲ್ಲವೋ, ವಿಶಾಲ ಹೃದಯದವರು. ಕನ್ನಡ ಚಿತ್ರಗಳಿಗಿಂತ ಬೇರೆ ಭಾಷೆ ಚಿತ್ರಗಳನ್ನು ಜಾಸ್ತಿ ನೋಡುತ್ತೇವೆ. ಈ ಹುಡುಗಿ ಹೇಳಿದ ಕಥೆ ಹೇಗಿದೆಯೆಂದರೆ, ಎರಡು ತೆಲುಗು ಎರಡು ಹಿಂದಿ ಭಾಷೆ ಚಿತ್ರ ಸೇರಿಸಿ ಕಥೆ ಹೇಳುತ್ತಿದ್ದಾಳೆ ಇವಳು . ಬಾಂಬ್ ಸಿಡಿಯುವಾಗ ಯಾರೋ ತೂರಿಕೊಂಡು ಓಡಿ ಬಂದನಂತೆ, ಒಂದೇ ಚಕ್ರದಲ್ಲಿ ಬೈಕ್ ಓಡಿಸಿದನಂತೆ, ಇವಳಿಗೆ ಪುಸಕ್ಕನೆ ಲವ್ ಬಂತಂತೆ!!!
ಈ ಮೇಲಿನ ಸಂಭಾಷಣೆಯನ್ನು ಬರೆದವರು ಯಾರೋ ಬದ್ದ ರಿಮೇಕ್ ವಿರೋಧಿಯೋ, ಇಲ್ಲ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಬಲಿಗರು ಅಲ್ಲ. ಸ್ವತಃ ಈ "ಬುದ್ದಿವಂತ "ಎಂಬ ರಿಮೇಕ್ ಚಿತ್ರದ ನಾಯಕನಾಗಿರೋ ಉಪೇಂದ್ರ ಈ ಚಿತ್ರಕ್ಕೆ ಬರೆದ ಸಂಭಾಷಣೆ. ತಮಾಷೆಯ ವಿಷಯವೆಂದರೆ ಈ ಸಂಭಾಷಣೆಯ ನಂತರ ಬರುವ ಹಾಡಿನ ರಾಗ ಕೂಡ ಅನ್ಯ ಭಾಷೆ ಚಿತ್ರದ ಹಾಡಿನ ನಕಲು ಅಂತೆ! ಇಷ್ಟಕ್ಕೆ ಮುಗಿಯಲಿಲ್ಲ ಈ ಬುದ್ದಿವಂತನ ಕರಾಮತ್ತು . ಈ ಚಿತ್ರದ ಇನ್ನೊಂದು ಹಾಡಿನ ರಾಗ ಕೂಡ ಮೂಲ ಚಿತ್ರದಿಂದ ಎಗರಿಸಿದ್ದು ಮತ್ತು ಗಾಬರಿಪಡುವಂತಹ ಇನ್ನೊಂದು ವಿಷಯವೇನೆಂದರೆ ಈ ಚಿತ್ರದಲ್ಲಿ ಒಂದು ಪೂರ್ಣ ತೆಲುಗು ಹಾಡು ಕೂಡ ಇದೆ !! ಬೇರೆ ಭಾಷೆಯ ಚಿತ್ರಗಳಲ್ಲಿ ಒಂದು ಕನ್ನಡ ಪದ ಹುಡುಕೋದು ಕಷ್ಟವಾದರೂ, ನಮ್ಮಲ್ಲಿ ಒಂದು ಸಂಪೂರ್ಣ ಹಾಡಿನಲ್ಲಿ ಅನ್ಯಭಾಷೆಯನ್ನು ಬಳಸಿದರೆ ಏನನ್ನೋಣ?
ರಿಮೇಕ್ ಚಿತ್ರಕ್ಕೆ ಸಬ್ಸಿಡಿ ಕೊಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದ ರಿಮೇಕ್'ಲೈನ್ ವೆಂಕಟೇಶ್ ತರಹದ ನಿರ್ಮಾಪಕರು, ಈಗ ಸರಕಾರ ರಿಮೇಕ್ ಚಿತ್ರಗಳಿಗೆ ಸಬ್ಸಿಡಿ, ತೆರಿಗೆ ವಿನಾಯಿತಿ ನೀಡಿದ ಮೇಲೆ ಅನ್ಯ ಭಾಷೆಯ ನಿರ್ಮಾಪಕರೇ ತಮ್ಮ ಚಿತ್ರಗಳನ್ನು ತಾವೇ ಕನ್ನಡದಲ್ಲಿ ನಿರ್ಮಿಸಲು ಬರುತ್ತಿರುವುದು ನೋಡಿ ಥರಗುಟ್ಟುತ್ತಿದ್ದಾರೆ. ಬೇಕಿತ್ತಾ ಈ ತಂಗಳನ್ನದ ಉಸಬಾರಿ? ರಿಮೇಕ್'ಲೈನ್ ಜೊತೆಗೆ"ಅಮೂಲ್ಯ" ನಿರ್ದೇಶಕ ಎಸ್ ನಾರಾಯಣ್ ಮತ್ತು ಹಳೆ ರಾಮಾಚಾರಿ ಹೊಸ ರಾಮಾಚಾರಿ ಖ್ಯಾತಿಯ ಇಬ್ಬರು ನಟರ ರಿಮೇಕ್ ತೆವಲಿನ ಬಗ್ಗೆ ಚಿಂತಿಸಿದರೆ ನಮಗೆ ಉಳಿಗಾಲವಿಲ್ಲ.
ಓಂ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮವನ್ನೇ ನೀಡಿ, ಬುದ್ದಿವಂತರಿಗಾಗಿ 'ಎ' ಚಿತ್ರ ನಿರ್ದೆಶಿಸಿ , ನಟಿಸಿ , ಚಿತ್ರ ನೋಡಿದ ನಮ್ಮಂಥವರನ್ನು ಪುಕ್ಕಟೆಯಾಗಿ ಬುದ್ದಿವಂತರನ್ನಾಗಿಸಿ, "ಉಪೇಂದ್ರ"ದ ಮೂಲಕ ಉಪ್ಪಿಗಿಂತ ರುಚಿ ಯಾವುದಿಲ್ಲ ಎಂದು ಸಾಬಿತು ಪಡಿಸಿದ ಉಪೇಂದ್ರ ಇಂದು ತನ್ನ ತನ್ನತನ, ಬುದ್ದಿವಂತಿಕೆಯನ್ನೇ ಹಣಕ್ಕಾಗಿ ಕಳೆದುಕೊಂಡು ಬಿಟ್ಟಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. h2o ಚಿತ್ರ ನಿರ್ದೆಶಿಸಿ ಕನ್ನಡದಲ್ಲಿ ತನ್ನ ಯಶಸ್ಸಿಗೆ ಹೊಟ್ಟೆಉರಿಪಡುತ್ತಿದ್ದ ಕೆಲವರಿಗೆ ಸುಮ್ಮನೆ ಒದೆಯಲು ಅವಕಾಶ ಮಾಡಿಕೊಟ್ಟದ್ದು ಸತ್ಯವಾದರೂ, ಮುಂದಿನ ಹೆಚ್ಚಿನ ಎಲ್ಲ ಚಿತ್ರಗಳು ರಿಮೇಕ್ ಆಗಿರುವುದಕ್ಕೆ ಸಬೂಬು ಆಗಬೇಕಾಗಿರಲಿಲ್ಲ.
ಕಾಲ ಮಿಂಚಿಲ್ಲ ಉಪೇಂದ್ರ, ಇನ್ನೂ ನಿಮಗೆ ವಯಸ್ಸಿದೆ, ಉಪಯೋಗಿಸಲು ಸ್ವಂತ ಬುದ್ದಿಯಿದೆ. ಬೇರೆ ಭಾಷೆಗಳ ಹಳಸಲು ಕಥೆ, ಹಾಡುಗಳನ್ನು ನಕಲು ಮಾಡುವುದು ಬಿಟ್ಟು ನಿಮ್ಮ ಬ್ರಾಂಡಿನ ಚಿತ್ರ ನಿರ್ಮಿಸಿ. ಗಣೇಶ್, ವಿಜಯ್'ಗೆ ಬೆಂಬಲವಾಗಿ ನಿಂತ ಕನ್ನಡ ಪ್ರೇಕ್ಷಕರು ಸ್ವಂತಿಕೆಯನ್ನು ತಂದಲ್ಲಿ ಉಪೆಂದ್ರನೆಂಬ ಹಳೆ ಹುಲಿಯ ಬೆಂಬಲಕ್ಕೆ ನಿಲ್ಲಲಾರರೆ?
ಇಂತಿ ನಿಮ್ಮ ಪ್ರೀತಿಯ,
ಅಧಿಕಪ್ರಸಂಗಿ